ಬೆಂಗಳೂರು ಅ.15 NEWS DESK : ಮಾದಕವಸ್ತುಗಳ ನಿಯಂತ್ರಣಕ್ಕೆ ಕಾನೂನುಗಳಲ್ಲಿ ಸೂಕ್ತ ತಿದ್ದುಪಡಿಗಳನ್ನು ತರಲು ಸರ್ಕಾರ ಯೋಚಿಸುತ್ತಿದೆ. ಯುವಜನತೆ ಈ ದುಶ್ಚಟಕ್ಕೆ ಬಲಿಯಾಗದಂತೆ, ಮಾದಕ ವಸ್ತುಗಳ ದಂಧೆಯನ್ನು ನಿಗ್ರಹಿಸುವುದೇ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ “ತಂಬಾಕು ಮುಕ್ತ ಯುವ ಅಭಿಯಾನ 2.0” ಕಾರ್ಯಕ್ರಮವನ್ನು ಉದ್ಘಾಟಿಸಿ, ಜಾಗೃತಿ ಜಾಥಾಗೆ ಚಾಲನೆ ನೀಡಿ, ನಂತರ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು. ಯುವಜನತೆಯಲ್ಲಿ ತಂಬಾಕು ಸೇವನೆಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ತಂಬಾಕು ಮುಕ್ತ ಯುವ ಅಭಿಯಾನ 2.0 ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ತಂಬಾಕು ಬಳಕೆಯನ್ನು ಮಾಡುವುದಿಲ್ಲ, ಮಾಡಲೂ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಇಂದು ಪ್ರತಿಜ್ಞೆ ಕೈಗೊಂಡಿದ್ದಾರೆ. ಈ ಪ್ರತಿಜ್ಞೆಯನ್ನು ಅಕ್ಷರಶ: ಪಾಲಿಸಬೇಕು ಎಂದರು. ವಿಶ್ವ ಆರೋಗ್ಯ ಸಂಸ್ಥೆ (WHO) ವರದಿಯಂತೆ ಭಾರತದಲ್ಲಿ ಪ್ರತಿ ವರ್ಷ 13.5 ಲಕ್ಷ ಜನರು ತಂಬಾಕು ಸೇವನೆಯಿಂದ ಸಾವಿಗೆ ಈಡಾಗುತ್ತಿದ್ದಾರೆ ಎಂಬುದು ಆತಂಕಕಾರಿ ವಿಷಯ. ಯುವಜನತೆ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಬದಲು ಈ ದುಶ್ಚಟಗಳಿಗೆ ಬಲಿಯಾಗುತ್ತಿರುವುದರಿಂದ ಈ ಪ್ರಮಾಣದ ಸಾವು ಸಂಭವಿಸುತ್ತಿದೆ. ತಂಬಾಕು ಸೇವಿಸುತ್ತಿರುವವರಲ್ಲಿ ಶೇ.50 ರಷ್ಟು ಜನ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಯುವಜನತೆ ತಂಬಾಕು ಸೇವನೆ ಹಾಗೂ ಮಾದಕವಸ್ತುಗಳ ವ್ಯಸನಕ್ಕೆ ಒಳಗಾಗಬಾರದು ಎಂದು ಕರೆ ನೀಡಿದರು. ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚಿದ್ದು, ಇದನ್ನು ನಿಗ್ರಹಿಸಲು ಸರ್ಕಾರ ಅನೇಕ ಕಾನೂನುಗಳನ್ನು ರಚಿಸಿದೆ. ಯುವಕ – ಯುವತಿಯರು ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಲ್ಲಿ, ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಹೇಳಿದರು. ರಾಜ್ಯದಲ್ಲಿ ಉತ್ತಮ ಮಳೆ – ಬೆಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದಂತೆ, ದುಶ್ಚಟಗಳಿಗೆ ಬಲಿಯಾಗದೇ ಆರೋಗ್ಯಕರ ಜೀವನ ನಡೆಸಿ ಯುವ ಸಮುದಾಯದವರಲ್ಲೂ ಸಂತಸ ಮೂಡುವಂತಾಗಲಿ ಎಂದು ಹಾರೈಸಿದರು. ಈ ಸಂದರ್ಭ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.