




ಮಡಿಕೇರಿ ಏ.4 NEWS DESK : ಕೊಡಗು ಗೌಡ ಸಮಾಜಗಳಲ್ಲಿ ಸಕ್ರಿಯರಾಗಿದ್ದ ಗೌಡ ಜನಾಂಗದ ಹಿತೈಷಿ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಗೆ ಕಾರಣಕರ್ತರಾದ ವ್ಯಕ್ತಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ ಅವರು ಸೋಮವಾರಪೇಟೆ ಗೋಣಿಮರೂರು ಗ್ರಾಮದ ನಿವಾಸಿಯಾಗಿರುವ ಪ್ರಸ್ತುತ ವೃತ್ತಿ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದ ವಿನಯ್ ಸೋಮಯ್ಯ ಗೌಡ ಸಮಾಜಗಳಲ್ಲಿ ಸಕ್ರಿಯರಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇವರ ಆತ್ಮಹತ್ಯೆ ಆತಂಕಕಾರಿ ಬೆಳವಣಿಗೆಯಾಗಿದ್ದು, ಯುವಕನ ಸಾವಿಗೆ ಕೊಡಗು ಗೌಡ ಸಮಾಜಗಳ ಒಕ್ಕೂಟ ಸಂತಾಪ ಸೂಚಿಸುತ್ತದೆ. ವಿನಯ್ ನ ಆತ್ಮಹತ್ಯೆಗೆ ಕಾರಣವಾದ ಬೆಳವಣಿಗೆಗಳನ್ನು ಒಕ್ಕೂಟ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ. ಸೌಮ್ಯ ಸ್ವಭಾವದ ವ್ಯಕ್ತಿಯಾಗಿರುವ ವಿನಯ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಕುರಿತು ಕೀಳು ಮಟ್ಟದ ಸಂದೇಶ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಮತ್ತು ಇದನ್ನು ಪ್ರಚಾರ ಕೂಡ ಪಡಿಸಲಾಗಿತ್ತು. ಇದರಿಂದ ಮಾನಸಿಕವಾಗಿ ಜರ್ಜರಿತಗೊಂಡು ಆತ್ಮಹತ್ಯೆಗೆ ಶರಣಾದ ವಿನಯ್ ನ ಸಾವಿಗೆ ಕಾರಣಕರ್ತರಾದ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂರ್ತಲೆ ಆರ್.ಸೋಮಣ್ಣ ಅವರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.