




ಸೋಮವಾರಪೇಟೆ ಏ.4 NEWS DESK : ಶ್ರೀ ರಾಮನವಮಿ ಉತ್ಸವ ಸಮಿತಿ ವತಿಯಿಂದ ಏ.6 ರಂದು ಆಂಜನೇಯ ದೇವಾಲಯದಲ್ಲಿ ಶ್ರೀ ರಾಮನವಮಿ ಹಾಗೂ ಸಂಜೆ ಪಟ್ಟಣದಲ್ಲಿ ಬೃಹತ್ ಶೋಭಾ ಯಾತ್ರೆ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಸುಭಾಷ್ ತಿಮ್ಮಯ್ಯ ಹೇಳಿದರು. ಏ.6 ರಂದು ಬೆಳಿಗ್ಗೆಯಿಂದಲೇ ಶ್ರೀ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಮಧ್ಯಾಹ್ನ ಜ್ಞಾನವಿಕಾಸ ಶಾಲೆಯ ಆವರಣದಲ್ಲಿ ಅನ್ನದಾನ ಏರ್ಪಡಿಸಲಾಗಿದೆ. ಸಂಜೆ 6.30ಕ್ಕೆ ಶೋಭ ಯಾತ್ರೆ ದೇವಾಲಯ ಆವರಣದಿಂದ ಪ್ರಾರಂಭವಾಗಲಿದೆ. ಶೋಭಾ ಯಾತ್ರೆಯಲ್ಲಿ 8 ಟ್ಯಾಬ್ಲೊಗಳೊಂದಿಗೆ ಅಲಂಕೃತ ಮಂಟಪದಲ್ಲಿ ಶ್ರೀರಾಮನ ವಿಗ್ರಹವನ್ನು ಕುಳ್ಳಿರಿಸಿ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು. ಸ್ಥಳೀಯ ವಾದ್ಯ ತಂಡಗಳು, ಮೈಸೂರು ತಮಟೆ, ನಾಸಿಕ್ ಬ್ಯಾಂಡ್, ವೀರಗಾಸೆ ನೃತ್ಯ, ವಿವಿಧ ವೇಷ ಕುಣಿತಗಳು ನೋಡಗರನ್ನು ರಂಜಿಸಲಿವೆ ಎಂದರು. ಕಕ್ಕೆಹೊಳೆ ಮಾರ್ಗವಾಗಿ, ಕ್ಲಬ್ ರಸ್ತೆ, ಖಾಸಗಿ ಬಸ್ ನಿಲ್ದಾಣ, ಮಡಿಕೇರಿ ರಸ್ತೆ, ಬಾಣವಾರ ರಸ್ತೆ ನಂತರ ಅದೇ ಮಾರ್ಗವಾಗಿ ಅಂಜನೇಯ ದೇವಾಲಯಕ್ಕೆ ರಾತ್ರಿ ತಲುಪಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಎಂ.ಬಿ.ಉಮೇಶ್, ಖಜಾಂಚಿ ಸಿ.ಸಿ.ನಂದ, ಪದಾಧಿಕಾರಿಗಳಾದ ದೀಪು ಕಿಬ್ಬೆಟ್ಟ, ದರ್ಶನ್ ಯಡೂರು ಇದ್ದರು.