ಮೈಸೂರು ಅ.23 NEWS DESK : ಕುಶಾಲನಗರ ತಾಲ್ಲೂಕಿನ ಕಣಿವೆ ಗ್ರಾಮದ ಖ್ಯಾತ ಕಾದಂಬರಿಕಾರ ಭಾರದ್ವಾಜ ಕೆ.ಆನಂದತೀರ್ಥ ಅವರೊಡನೆ ‘ಕನ್ನಡ ಓದುಗರ ಒಕ್ಕೂಟ 2012 ಮೈಸೂರು’ ಸಂಸ್ಥೆಯಿಂದ ಸಂವಾದ ಕಾರ್ಯಕ್ರಮ ನಡೆಯಿತು. ತಿಂಗಳಿಗೊಂದು ಕನ್ನಡ ಪುಸ್ತಕ ಓದಿ ಆ ಕುರಿತು 2012ರಿಂದ ಚರ್ಚೆ, ಸಂವಾದ ನಡೆಸುತ್ತಾ ಬರುತ್ತಿರುವ ಮೈಸೂರಿನ ಮಹಿಳಾ ಸಾಹಿತ್ಯ ಓದುಗರ ಒಕ್ಕೂಟ ಈ ಬಾರಿ ಕಾಳಿದಾಸ ರಸ್ತೆಯ ‘ಅನ್ ಬಾಂಡ್ ಎಸ್ಕೆಪ್ ರೂಂ’ ಸಭಾಂಗಣದಲ್ಲಿ ಭಾರದ್ವಾಜ ಆನಂದ ತೀರ್ಥ ಅವರ ‘ವೀರಲೋಕ’ ಪ್ರಕಾಶನದಿಂದ ಮರುಮುದ್ರಣ ಕಂಡಿರುವ ‘ಕ್ರಮಣ’ ಕಾದಂಬರಿ ಕುರಿತು ಸಂವಾದ ನಡೆಸಿದರು. ಈ ಸಂದರ್ಭ ಕಾದಂಬರಿ ಕುರಿತು ಓದುಗರು ತಮ್ಮ ಅಭಿಪ್ರಾಯ ಹಂಚಿಕೊಂಡರಲ್ಲದೆ ಕಾದಂಬರಿಯ ರಚನೆ ಕುರಿತು ಲೇಖನದೊಂದಿಗೆ ಚರ್ಚಿಸಿ, ಮಾತುಕತೆ ನಡೆಸಿದರು. ಕಾದಂಬರಿ ರಚನೆಯ ಕ್ರಮದ ಕುರಿತು ಓದುಗರೊಬ್ಬರ ಪ್ರಶ್ನೆಗೆ ಉತ್ತರಿಸಿದ ಭಾರದ್ವಾಜರು ‘ಕಾದಂಬರಿಯ ವಿಷಯ ಸಹಜವಾಗಿ ಬರಹಗಾರನಿಗೆ ದಕ್ಕಿದ ಅನುಭವ ಆಗಿದ್ದಲ್ಲಿ ಅದು ಓದುಗರನ್ನು ಹೆಚ್ಚು ತಲುಪಲು ಸಾಧ್ಯ ಅಂದರು. ಯಾವುದೇ ಪೂರ್ವಾಪರ ಹಾಗೂ ಮುಂದಾಲೋಚನೆಗಳ ಗೊಡವೆಗೆ ಹೋಗದೆ ಆ ಕ್ಷಣಕ್ಕೆ ತೋಚಿದ್ದನ್ನು ನೋಟ್ ಪ್ಯಾಡ್ ನಲ್ಲಿ ಬರೆಯುತ್ತಾ ಹೋಗುವುದು, ಬರೆದು ಮುಗಿದ ನಂತರ ಅದನ್ನು ಯಾವುದೇ ತಿದ್ದುಪಡಿ ಮಾಡದೆ ಅಕ್ಷರ ದೋಷ ಇದ್ದಲ್ಲಿ ಸರಿಪಡಿಸಿ ಪ್ರಕಟಿಸುವುದು ನನ್ನ ಬರವಣಿಗೆಯ ಕ್ರಮ ಅಂದರು. ಒಬ್ಬ ಬರಹಗಾರನ ಪುಸ್ತಕವನ್ನು ಹಲವರು ತಿದ್ದುವ ಕ್ರಮದ ಕುರಿತು ವಿಷಾದ ವ್ಯಕ್ತಪಡಿಸಿದ ಅವರು ಹಾಗೆ ತಿದ್ದಿ ತೀಡಿ ಬಿಡುಗಡೆಯಾಗುವ ಪುಸ್ತಕಗಳು ಮೂಲ ಲೇಖಕನ ಪುಸ್ತಕವಾಗಿ ಉಳಿಯಲು ಸಾಧ್ಯ ಇಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ತಮ್ಮ ತಿರುಗಾಟ, ಜೀವನದ ಅನುಭವ ಹಾಗೂ ಪತ್ರಿಕೋದ್ಯಮದ ಅನುಭವಗಳು ತಮ್ಮ ಪುಸ್ತಕಗಳ ಸರಕುಗಳು ಎಂದರು. ಕನ್ನಡ ಓದುಗರ ಒಕ್ಕೂಟದ ಅಧ್ಯಕ್ಷೆ ಶುಭ ಸುಜಯ್ ಅರಸ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಕ್ಕೂಟದ ಪ್ರಮುಖರು ಹಾಗೂ ಸದಸ್ಯರು, ಭಾರದ್ವಾಜರ ಆಪ್ತರಾದ ಕೆ.ಯು.ಉಮೇಶ್, ವೆಂಕಟ್ ನಾಯಕ್, ಕೆ.ಎಸ್.ಮಹೇಶ್ ಹಾಗೂ ರಂಜಿತ್ ಕವಲಪಾರ ಹಾಜರಿದ್ದರು. ಈ ಸಂದರ್ಭ ಲೇಖಕ ಭಾರದ್ವಾಜರನ್ನು ಸನ್ಮಾನಿಸಿ ಗೌರವಿಸಲಾಯಿತು.