ಮಡಿಕೇರಿ ಅ.25 NEWS DESK : ಪ್ರವಾಸೋದ್ಯಮಕ್ಕೆ ಪೂರಕವಾಗಿ, ಪ್ರಮುಖ ಪ್ರವಾಸಿತಾಣಗಳನ್ನು ಕೇಂದ್ರವಾಗಿರಿಸಿಕೊಂಡು ರಚಿಸಲಾದ ಚಿತ್ರ ಕಲಾಕೃತಿಗಳ ಪ್ರದರ್ಶನವನ್ನು ಸಧ್ಯದಲ್ಲಿ ನಗರದಲ್ಲಿ ಆಯೋಜಿಸುವುದಾಗಿ ಕಲಾವಿದ ಸಂದೀಪ್ ಕುಮಾರ್ ಆರ್. ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳ ಪ್ರಮುಖ ಪ್ರವಾಸಿ ತಾಣಗಳನ್ನು ತಾನು ಕುಂಚದಿಂದ ಸೆರೆಹಿಡಿದಿದ್ದೇನೆ. ಇಂತಹ 237 ಕಲಾಕೃತಿಗಳ ಪ್ರದರ್ಶನ ನನ್ನ ಉದ್ದೇಶವೆಂದರು. ಚಿತ್ರಕಲಾ ಪ್ರದರ್ಶನಕ್ಕೆ ರಾಜಾಸೀಟಿನಲ್ಲಿ ಅವಕಾಶ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ವಿನಂತಿಸಿಕೊಂಡಿದ್ದೆನಾದರು, ಸೂಕ್ತ ಸ್ಪಂದನ ದೊರಕಿಲ್ಲ. ಹೀಗಿದ್ದೂ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ನನ್ನ ಕಲಾ ಸಾಧನೆ ಮತ್ತು ತಾನು ರಚಿಸಿರುವ ಕಲಾಕೃತಿಗಳ ಪ್ರದರ್ಶನಕ್ಕೆ ಬೆಂಬಲವನ್ನು ನೀಡಿದ್ದಾರೆ. ಈ ಹಿನ್ನೆಲೆ ಅವಕಾಶ ದೊರೆತಲ್ಲಿ ಶನಿವಾರದಿಂದಲೆ ರಾಜಾಸೀಟಿನಲ್ಲಿ ಚಿತ್ರಕಲಾ ಪ್ರದರ್ಶನ ಆಯೋಜಿಸುವುದಾಗಿ ಹೇಳಿದರು. ರಾಜಾಸೀಟಿನಲ್ಲಿ ಅವಕಾಶ ದೊರಕದಿದ್ದಲ್ಲಿ ಚೈನ್ ಗೇಟ್ ಬಳಿ ಈ ಹಿಂದೆ ತಾನು ನಡೆಸುತ್ತಿದ್ದ ಆರ್ಟ್ ಗ್ಯಾಲರಿ ಸ್ಥಳದಲ್ಲಿ ಚಿತ್ರಕಲಾ ಪ್ರದರ್ಶನ ನಡೆಸಬೇಕೆನ್ನುವ ಚಿಂತನೆ ತನ್ನದು. ಈ ನನ್ನ ಪ್ರಯತ್ನಗಳಿಗೆ ಪತ್ನಿ ಕವಿತಾ ಸಾಕಷ್ಟು ಸಹಕಾರ ನೀಡುತ್ತಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕವಿತಾ ಉಪಸ್ಥಿತರಿದ್ದರು.