ಮಡಿಕೇರಿ ಅ.26 NEWS DESK : ಪಿ ಆ್ಯಂಡ್ ಜಿ ಕ್ರಿಯೇಷನ್ಸ್ ಹಾಗೂ ಕೊಡಗು ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಿಸಿರುವ “ಕಾಲತ್‍ರ ಕಳಿ” ಕೊಡವ ಚಲನಚಿತ್ರ ಅ.28 ರಂದು ವಿರಾಜಪೇಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಚಲನಚಿತ್ರದ ನಿರ್ದೇಶಕ ಬಾಳೆಯಡ ಪ್ರತೀಶ್ ಪೂವಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆ ಕೊಡವ ಸಮಾಜದಲ್ಲಿ ಬೆಳಿಗ್ಗೆ 10 ಗಂಟೆಗೆ ವಿರಾಜಪೇಟೆ ಪುರಸಭೆಯ ಅಧ್ಯಕ್ಷರಾದ ಮನೆಯಪಂಡ ದೇಚಮ್ಮ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಕಾಫಿ ಬೆಳೆಗಾರರು ಹಾಗೂ ದಾನಿಗಳಾದ ನಡಿಕೇರಿಯಂಡ ವಿಕ್ರಮ್ ಪಾಲ್ಗೊಳ್ಳಲಿದ್ದಾರೆ ಎಂದರು. ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ಆಚೆಯಡ ಗಗನ್ ಗಣಪತಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸೋಮೆಯಂಡ ಬೋಸ್ ಬೆಳ್ಯಪ್ಪ ಹಾಗೂ ಸಾರ್ವಜನಿಕರ ನೆರವಿನಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದ ಮುಖ್ಯ ಪಾತ್ರದಲ್ಲಿ ಮಾಚೆಟ್ಟಿರ ವಿಕಾಸ್ ಬೋಪಣ್ಣ, ಕೋಪುಡ ದೇಸ್ನ ದೇಚಮ್ಮ ನಟಿಸಿದ್ದು, ವಿಶೇಷ ಪಾತ್ರದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ 100ಕ್ಕೂ ಹೆಚ್ಚು ಮಂದಿ ಅಭಿನಯಿಸಿದ್ದು, ಕೊಡಗಿನ ವಿವಿಧೆಡೆ ಚಿತ್ರೀಕರಿಸಲಾಗಿದೆ. ಚಿತ್ರೀಕರಣ ಹಾಗೂ ಸಂಕಲನವನ್ನು ಪಾಪು ಚಂದ್ರಶೇಖರ್, ಧ್ವನಿ ಮುದ್ರಣವನ್ನು ಟಿ.ಡಿ.ಮೋಹನ್ ನಿರ್ವಹಿಸಿದ್ದಾರೆ. ಸಂಗೀತ ನಿರ್ದೇಶಕರಾಗಿ ವಿಲ್‍ಸ್ಟನ್ ಕಾರ್ಯನಿರ್ವಹಿಸಿದ್ದಾರೆ. ಮುಕ್ಕಾಟಿರ ಮೌನಿ ನಾಣಯ್ಯ ಹಾಗೂ ಕೋಟೆರ ವಿನು ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ. ಚೆಟ್ಟೀರ ಗ್ರಂಥ, ಕಬ್ಬಚೀರ ರಶ್ಮಿ, ಕೋಟೆರ ವಿನು ಹಾಗೂ ಟಿ.ಡಿ.ಮೋಹನ್ ಹಾಡಿದ್ದಾರೆ. ಪಿ ಆ್ಯಂಡ್ ಜಿ ಕ್ರಿಯೇಷನ್ಸ್ ಈ ಮೊದಲು “ಭಾವ ಬಟ್ಟೆ”, “ಉಷಾರ್” ಹಾಗೂ “ಕಲ್ಲಕೆರೆ ಮಾದೇವಿ” ಎನ್ನುವ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು ಎಂದು ಪ್ರತೀಶ್ ಪೂವಯ್ಯ ಹೇಳಿದರು. ಮತ್ತೋರ್ವ ನಿರ್ದೇಶಕ ಆಚೆಯಡ ಗಗನ್ ಗಣಪತಿ ಮಾತನಾಡಿ, ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಚಟುವಟಿಕೆ ಹಾಗೂ “ಹನಿ ಟ್ರ್ಯಾಪ್” ಗಳಂತಹ ಮಾರಕ ಅಂಶಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ “ಕಾಲತ್‍ರ ಕಳಿ”ಯಲ್ಲಿ ಯುವಕÀ, ಯುವತಿಯರಿಗೆ ಉತ್ತಮ ಸಂದೇಶವನ್ನು ನೀಡಿ ಸಾಮಾಜಿಕ ಜಾಗೃತಿ ಮೂಡಿಸಲಾಗಿದೆ. ಕೊಡಗಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಿತ್ರವನ್ನು ವೀಕ್ಷಿಸಿ ಚಿತ್ರತಂಡವನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ಕಲಾವಿದ ಚೇನಂಡ ಗಿರೀಶ್ ಪೂಣಚ್ಚ ಮಾತನಾಡಿ, “ಕಾಲತ್‍ರ ಕಳಿ” ಚಲನಚಿತ್ರ ಅ.28 ಹಾಗೂ 29 ರಂದು ವಿರಾಜಪೇಟೆ ಕೊಡವ ಸಮಾಜದಲ್ಲಿ ಪ್ರತಿದಿನ 3 ಪ್ರದರ್ಶನ ಕಾಣಲಿದೆ. ಬೆಳಿಗ್ಗೆ 10.30, ಮಧ್ಯಾಹ್ನ 2 ಗಂಟೆ ಮತ್ತು ಸಂಜೆ 6 ಗಂಟೆಗೆ ಪ್ರದರ್ಶನವಿರುತ್ತದೆ. ಅ.31 ಹಾಗೂ ನ.1 ರಂದು ವಿರಾಜಪೇಟೆ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಮೂರು ಪ್ರದರ್ಶನ ನೀಡಲಾಗುವುದು. ಅಲ್ಲದೆ ಕೊಡಗಿನ ವಿವಿಧೆಡೆ ಚಿತ್ರ ಪ್ರದರ್ಶನ ಕಾಣಲಿದ್ದು, ಮೈಸೂರು, ಬೆಂಗಳೂರು ಕೊಡವ ಸಮಾಜದಲ್ಲೂ ಪ್ರದರ್ಶನವಿರುತ್ತದೆ. ಕೊಡಗಿನ ಸಮಸ್ತ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಿತ್ರವನ್ನು ವೀಕ್ಷಿಸುವಂತೆ ತಿಳಿಸಿದರು. ಕಾರ್ಯಕಾರಿ ನಿರ್ಮಾಪಕ ಸೋಮೆಯಂಡ ಬೋಸ್ ಬೆಳ್ಯಪ್ಪ ಮಾತನಾಡಿ, ಚಿತ್ರದ ಪ್ರೀಮಿಯರ್ ಶೋ ಅ.12 ರಂದು ವಿರಾಜಪೇಟೆ ಕೊಡವ ಸಮಾಜದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಸಮ್ಮುಖದಲ್ಲಿ ಪ್ರದರ್ಶಿಸಲಾಗಿದೆ ಎಂದು ಹೇಳಿದರು. ಕಲಾವಿದೆ ತಾತಂಡ ಪ್ರಭಾ ನಾಣಯ್ಯ ಮಾತನಾಡಿ, ಎಲ್ಲಾ ಕಲಾವಿದರು ಉತ್ತಮವಾಗಿ ನಟಿಸಿದ್ದು, ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಚಿತ್ರದ ಮೂಲಕ ಯುವ ಸಮೂಹಕ್ಕೆ ಉತ್ತಮ ಸಂದೇಶವನ್ನು ನೀಡಲಾಗಿದ್ದು, ಕುಟುಂಬ ಸಮೇತರಾಗಿ ಚಿತ್ರ ವೀಕ್ಷಿಸಬಹುದಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಲಾವಿದೆ ಕಾಣತಂಡ ಬೀನ ಜಗದೀಶ್ ಉಪಸ್ಥಿತರಿದ್ದರು.
:: ಚಿತ್ರ ತಂಡ :: ಚಲನಚಿತ್ರದ ತಾರಗಣದಲ್ಲಿ ಮಾಚೆಟ್ಟಿರ ವಿಕಾಶ್ ಬೋಪಣ್ಣ, ಕೋಪುಡ ದೇಸ್ನ ದೇಚಮ್ಮ, ತಾತಂಡ ಪ್ರಭಾ ನಾಣಯ್ಯ, ಪಟ್ಟಡ ಧನು, ಸೋಮೆಯಂಡ ಬೋಸು ಬೆಳ್ಯಪ್ಪ, ಬಿದ್ದಂಡ ಉತ್ತಮ್, ಮಲ್ಲಮಾಡ ಶ್ಯಾಮಲ ಸುನಿಲ್, ಮುಂಡಚಾಡಿರ ರಿನಿ ಭರತ್, ತಾತಂಡ ಮಿನ್ನು ನವೀನ್, ಕಾಳೆಂಗಡ ಸಪ್ನ, ಚೇನಂಡ ಗಿರೀಶ್ ಪೂಣಚ್ಚ, ಕಾಣತಂಡ ಬೀನ ಜಗದೀಶ್, ಬಾನಂಗಡ ಭಾಗ್ಯ ಪ್ರದೀಪ್, ಮಾದೆಯಂಡ ಲೆರಾಯಿ, ಮಾದೆಯಂಡ ಸಂಪಿ ಪೂಣಚ್ಚ, ಪಾಲೆಯಂಡ ಸುಚಿತ್ರ, ಕಳ್ಳಿಚಂಡ ಭಾರತಿ ಜೋಕಿರ ವಿಠಲ್, ತಿತೀರ ಸುರಾಜ್ ಕುಟ್ಟಪ್ಪ, ಆಂಡಮಡ ಪವನ್, ಸಾತ್ವಿಕ್, ಜಮ್ಮಡ ಪ್ರೀತು ಅಪ್ಪಯ್ಯ, ಮಲ್ಲಪನೆರ ವಿನು, ಕರ್ತಮಾಡ ರೋಷನ್, ಮಂಡೇಟಿರ ರಜತ್, ಪಳಗಂಡ ರೇಖ, ಸುಳ್ಳಿಮಾಡ ಕರಿಷ್ಮ, ಚೊಟ್ಟೆಕಾಳಪಂಡ ಶಾಲಿನಿ, ಚೇಮಿರ ಸೀತಮ್ಮ, ಕೊಂಡಿರ ಪ್ರಮೀಕ ಸೇರಿದಂತೆ 100ಕ್ಕೂ ಅಧಿಕ ಕಲಾವಿದರು ಬಣ್ಣ ಹಚ್ಚಿದ್ದಾರೆ.