ವಿರಾಜಪೇಟೆ ಅ.30 NEWS DESK : ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಅಂತಿಮ ಬಿಸಿಎ ವಿದ್ಯಾರ್ಥಿಗಳಿಗೆ ವೃತ್ತಿಯಾಧರಿತ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸಲಾಯಿತು. ಮೂಲತಃ ಜಿಲ್ಲೆಯವರಾದ ನ್ಯೂಜಿ ಲ್ಯಾಂಡ್ ನ ಗ್ಯಾರೆಂಟೆಡ್ ಫ್ಲೋ ಸಿಸ್ಟಮ್ಸ್ ನ ಜನರಲ್ ಮ್ಯಾನೇಜರ್ ಕಾರ್ಯಪ್ಪ ಕರಂಬಯ್ಯ ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ ಹಾಗೂ ಮಾರ್ಗದರ್ಶನದ ಕುರಿತು ಮಾಹಿತಿಯನ್ನು ನೀಡಿದರು. ಭವಿಷ್ಯದಲ್ಲಿ ಉತ್ತಮ ಶೈಕ್ಷಣಿಕ ತರಬೇತಿಗೆ ಅಂತಾರಾಷ್ಟ್ರೀಯ ಮಟ್ಟದವರೆಗೂ ಅವಕಾಶವಿದೆ ಎಂದ ಅವರು ಸೂಕ್ತವಾದ ತರಬೇತಿಯನ್ನು ಪಡೆದುಕೊಂಡಾಗ ಮಾತ್ರ ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯ ಎಂದು ಹೇಳಿದರು. ಮಾತ್ರವಲ್ಲದೆ ದೇಶದ ಹೊರಗಡೆ ವೃತ್ತಿಗೆ ತೆರಳುವಾಗ ನಕಲಿ ಏಜನ್ಸಿ ಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಹೇಳಿದರು. ಮಾತ್ರವಲ್ಲದೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ಮಷೀನ್ ಲರ್ನಿಂಗ್ ನ ವಿನೂತನ ಮಾದರಿಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಪ್ರಸ್ತುತದಲ್ಲಿ ಉದ್ಯೋಗವನ್ನು ಪಡೆಯಲು ವೃತ್ತಿ ತರಬೇತಿ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ತಯಾರಿಯನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ನಿರ್ಧಾರವನ್ನು ತಾವೇ ನಿರ್ಧರಿಸಿ ಜಾಗೃತರಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭ ಬಿಸಿಎ ವಿಭಾಗದ ಮುಖ್ಯಸ್ಥರಾದ ಸೌಮ್ಯ ಸೋಮರಾಜ್, ಉಪನ್ಯಾಸಕರು, ಅಂತಿಮ ಬಿ ಸಿ ಎ ವಿದ್ಯಾರ್ಥಿಗಳು ಹಾಜರಿದ್ದರು.ವಿದ್ಯಾರ್ಥಿನಿ ಸ್ನೋಹ ಕಾರ್ಯಕ್ರಮವನ್ನು ನಿರೂಪಿಸಿದರು.