ಮಡಿಕೇರಿ ಅ.30 NEWS DESK : ಮಡಿಕೇರಿ ಹಿಂದೂ ಮಲಯಾಳಿ ಸಂಘ ವತಿಯಿಂದ ನ.1 ರಂದು ಮಡಿಕೇರಿಯಲ್ಲಿ ಓಣಾಘೋಷಂ, ಓಣಂ ಸಧ್ಯ ಮತ್ತು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಓಣಂ ಆಚರಣಾ ಸಮಿತಿಯ ಅಧ್ಯಕ್ಷ ಟಿ.ಆರ್ ವಾಸುದೇವ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ದಿನಗಳ ಕಾಲ ಸಂಭ್ರಮದಿಂದ ಜರುಗುವ ಓಣಂ ಹಬ್ಬವು ಕೇರಳದ ಸಂಪ್ರದಾಯದೊಂದಿಗೆ ಬೆಸೆದುಕೊಂಡಿದೆ. ಕೇರಳದ ವಯನಾಡಿನಲ್ಲಿ ಸಂಭವಸಿದ ಪ್ರಕೃತಿ ವಿಕೋಪದಲ್ಲಿ ಅಪಾರ ಸಾವು ನೋವು ಸಂಭವಿಸಿದ ಹಿನ್ನೆಲೆಯಲ್ಲಿ ಮೃತರಿಗೆ ಸಂತಾಪ ಸೂಚಿಸುವ ಸಲುವಾಗಿ ಓಣಾಘೋಷಂ, ಓಣಂ ಸಧ್ಯ ಕಾರ್ಯಕ್ರಮದ ಮೆರವಣಿಗೆಯನ್ನು ಕೈಬಿಡಲಾಗಿದೆ ಎಂದರು. ಉಳಿದಂತೆ ಎಲ್ಲಾ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು. ಸಂಘದ ಗೌರವಾಧ್ಯಕ್ಷ ಕೆ.ಎಸ್.ರಮೇಶ್ ಮಾತನಾಡಿ, ನ.1 ರಂದು ಬೆಳಿಗ್ಗೆ 9 ಗಂಟೆಗೆ ಶಕ್ತಿ ದಿನಪತ್ರಿಕೆಯ ಸಂಪಾದಕ ಅನಂತಶಯನ ಕನ್ನಡ ಧ್ವಜಾರೋಹಣ ಮಾಡಲಿದ್ದು, ರಾಷ್ಟ್ರಪತಿ ಪದಕ ಪುರಸ್ಕೃತರಾದ ನಿವೃತ್ತ ಪೊಲೀಸ್ ಅಧಿಕಾರಿ ಅಚ್ಚುತ್ತ ನಾಯರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ರಾಷ್ಟ್ರಗೀತೆ, ನಾಡಗೀತೆ, ರೈತಗೀತೆ, ಸಂಘದ ಶೀರ್ಷಿಕೆ ಗೀತೆ, ರಾಜ್ಯೋತ್ಸವ ನೃತ್ಯ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಮಕ್ಕಳ ಛದ್ಮವೇಶ ಮತ್ತು ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದರು. ಬೆಳಿಗ್ಗೆ 10.30ಕ್ಕೆ ನಗರದ ಕಾವೇರಿ ಹಾಲ್‍ನಲ್ಲಿ ತಿರುವಾದಿರ ನೃತ್ಯದೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಮಾಜಿ ಶಾಸಕ ಕೆ.ಜಿ.ಬೋಪಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕೆ.ವಿ.ಧರ್ಮೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಉದ್ಯಮಿ ಕೆ.ಎಂ.ಗಣೇಶ್, ಸಂಘದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು. ಮಧ್ಯಾಹ್ನದ ಓಣಂ ಸಧ್ಯದಲ್ಲಿ 20 ಬಗೆಯ ಖಾದ್ಯಗಳಿರಲಿದೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯಲಿದ್ದು, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಕೆ.ಎಸ್.ರಮೇಶ್ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕೆ.ವಿ.ಧರ್ಮೇಂದ್ರ, ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯರ್, ಮಡಿಕೇರಿ ಮಹಿಳಾ ಘಟಕದ ಅಧ್ಯಕ್ಷೆ ಲತಾರಾಜನ್, ಪ್ರಚಾರ ಸಮಿತಿ ಸಂಚಾಲಕ ರವಿ ಅಪ್ಪುಕುಟ್ಟನ್ ಉಪಸ್ಥಿತರಿದ್ದರು.