ಮಡಿಕೇರಿ ನ.2 NEWS DESK : ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಕತ್ತಲೆಂಬ ಅಜ್ಞಾನವನ್ನು ಕಳೆದು ಸುಜ್ಞಾನವೆಂಬ ದೀಪ ಹಚ್ಚುವ ಮೂಲಕ ಪರಿಸರ ಸ್ನೇಹಿ ಹಸಿರು ದೀಪಾವಳಿ ಹಬ್ಬವನ್ನು ಆಚರಿಸಲು ಜನಜಾಗೃತಿ ಮೂಡಿಸಲಾಗುತ್ತಿದೆ. ದೀಪಾವಳಿ ಹಬ್ಬಕ್ಕೂ ಪಟಾಕಿಗೂ ಅವಿನಾಭಾವ ಬಾಂಧವ್ಯ ಬೆಸೆದಿದೆ. ಆದರೆ ಈ ಪಟಾಕಿಗಳು ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡುತ್ತವೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಪರಿಸರಕ್ಕೆ ದಟ್ಟ ಹೊಗೆ ಸೇರಿಸುವ, ರಾಸಾಯನಿಕ, ಭಾರ ಲೋಹಯುಕ್ತ ಪಟಾಕಿ ಬಳಸದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಉಂಟಾಗುವ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಯಲು, ಹಿರಿಯ ನಾಗರಿಕರು, ವಯೋವೃದ್ಧರು ಮತ್ತು ಪುಟ್ಟ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪಟಾಕಿ ತ್ಯಜಿಸಲು ಇಲ್ಲವೇ ಹಸಿರು ಪಟಾಕಿಗಳನ್ನು (Green Crackers) ಮಾತ್ರ ಬಳಸುವಂತೆ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಾಗರಿಕರಿಗೆ ಮನವಿ ಮಾಡಿವೆ. ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ದ, ವಾಯು ಮತ್ತು ಜಲ ಮಾಲಿನ್ಯ ಹಾಗೂ ನೆಲ ಮಾಲಿನ್ಯದ
ಜತೆಗೆ ಪ್ರಾಣಿ – ಪಕ್ಷಿ ಜೀವ ಸಂಕುಲಗಳು ಸೇರಿದಂತೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಿ ಪರಿಸರ ವ್ಯವಸ್ಥೆಗೂ ತೀವ್ರ ಧಕ್ಕೆಯುಂಟಾಗುತ್ತದೆ.ಈ ದಿಸೆಯಲ್ಲಿ ಪ್ರತಿಯೊಬ್ಬರೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇಂತಹ ಪರಿಸರ ಸ್ನೇಹಿ ಚಟುವಟಿಕೆಗಳ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ದೀಪಾವಳಿ ಹಬ್ಬದಲ್ಲಿ ದೀಪ ಹಚ್ಚಿ ದೀಪಾವಳಿ ಆಚರಿಸಿ, ಹಸಿರು ಪಟಾಕಿಯನ್ನಷ್ಟೇ ಸಿಡಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಕೂಡ ನಾಗರಿಕರಲ್ಲಿ ಜಾಗೃತಿ ಮೂಡಿಸಿವೆ. ಈ ದಿಸೆಯಲ್ಲಿ 125 ಡೆಸಿಬಲ್ ಗಿಂತ ಹೆಚ್ಚು ಶಬ್ದ ಮಾಲಿನ್ಯ ಉಂಟುಮಾಡುವ ಪಟಾಕಿಗಳನ್ನು ಸರ್ಕಾರ ನಿಷೇಧಿಸಿದೆದ್ದು, ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಹಲವು ಮಕ್ಕಳು ಪಟಾಕಿ ಸಿಡಿಸುವಾಗ ಕಣ್ಣಿಗೆ ಪೆಟ್ಟು ಮಾಡಿಕೊಂಡು ದೃಷ್ಟಿದೋಷ ಎದುರಿಸುತ್ತಿರುವ ಎಷ್ಟೋ ಮಕ್ಕಳು ಕಾಣ ಸಿಗುತ್ತಾರೆ. ಹಲವರು ಗಾಯಗೊಳ್ಳುತ್ತಾರೆ. ಹೀಗಾಗಿ ಸಾಧ್ಯವಾದಷ್ಟು ಪಟಾಕಿ ಹಚ್ಚದಿರುವುದೇ ಉತ್ತಮ. ಪಟಾಕಿ ಸಿಡಿಸಲೇಬೇಕು ಎಂದಾದರೆ ಪರಿಸರಕ್ಕೆ ಹಾನಿ ಉಂಟು ಮಾಡದಿರುವ ಹಸಿರು ಪಟಾಕಿಗಳನ್ನು ಮಾತ್ರವೇ ಸಿಡಿಸಬೇಕು ಎಂದು ಸರ್ಕಾರ ಸ್ಪಷ್ಡ ಸೂಚನೆ ನೀಡಿದೆ.
“ಸ್ವಚ್ಚ ದೀಪಾವಳಿ, ಸ್ವಸ್ಥ ದೀಪಾವಳಿ”: ಕೊಡಗು ಜಿಲ್ಲೆಯಲ್ಲಿ ದೀಪಾವಳಿ ಆಚರಣೆಗೆ ಸಂಬಂಧಿಸಿದಂತೆ “ಸ್ವಚ್ಚ ದೀಪಾವಳಿ, ಸ್ವಸ್ಥ ದೀಪಾವಳಿ”: ನಮ್ಮ ನಡೆ ಹಸಿರೆಡೆಗೆ ಗೋ ಗ್ರೀನ್ ಅಭಿಯಾನ. : 2024 ದಡಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತ ಜಾಗೃತಿ ಅಭಿಯಾನ: 2024 ವನ್ನು ಹಮ್ಮಿಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿಗಳು ನೀಡಿರುವ ಸೂಚನೆಯಂತೆ
ಜಿಲ್ಲೆಯ ಶಾಲಾ – ಕಾಲೇಜು ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಮಾಲಿನ್ಯಮುಕ್ತ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ಜನಜಾಗೃತಿ ಮೂಡಿಸಲು ಮನವಿ ಮಾಡಲಾಗಿದೆ. ದೀಪಾವಳಿ ಹಬ್ಬಕ್ಕೂ ಮುನ್ನ ಕೊಡಗು ಜಿಲ್ಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಶಾಲಾ- ಕಾಲೇಜುಗಳಲ್ಲಿ ಇಕೋ ಕ್ಲಬ್, ಎನ್.ಎಸ್.ಎಸ್. ಘಟಕಗಳು ಮತ್ತಿತರ ಘಟಕಗಳ ವತಿಯಿಂದ
ಬೆಳಗ್ಗಿನ ಪ್ರಾರ್ಥನಾ ವೇಳೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಶಿಕ್ಷಣ ಇಲಾಖೆಯ ವತಿಯಿಂದ ಮಾಹಿತಿ ನೀಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಕಳೆದ 14 ವರ್ಷಗಳಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ,ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಎನ್.ಎಸ್.ಎಸ್. ಮತ್ತಿತರ ಸಂಸ್ಥೆಗಳ ವತಿಯಿಂದ ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಕ್ರಮೇಣ ಪಟಾಕಿ ಸಿಡಿತದ ಪ್ರಮಾಣ ಕ್ಷೀಣಿಸುತ್ತಿರುವುದು ಕಂಡುಬರುತ್ತಿದೆ.
ಬೆಳಕಿನ ಹಬ್ಬ ದೀಪಾವಳಿ ಆಚರಣೆ :: ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಮಾಲಿನ್ಯಕಾರಿ ಪಟಾಕಿಗಳನ್ನು ತ್ಯಜಿಸುವ ಮೂಲಕ
ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಸರ್ಕಾರವು ಜನತೆಗೆ ಸ್ಪಷ್ಟ ಸೂಚನೆ ನೀಡಿದೆ. ಪಟಾಕಿ ಸಿಡಿತದ ಶಬ್ಧದ ಮಟ್ಟವು 125 ಡೆಸಿಬಲ್‌ಗಳ ಅನುಮತಿಸುವ ಮಿತಿಯೊಳಗೆ ಇರಬೇಕು ಮತ್ತು ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ದೀಪಾವಳಿ ಹಬ್ಬಕ್ಕೆ ಪಟಾಕಿ ವರ್ತಕರು ಹಸಿರು ಪಟಾಕಿಯನ್ನಷ್ಟೇ ದಾಸ್ತಾನು, ಮಾರಾಟ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಈ ಕುರಿತು ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿರುವ ಸರ್ಕಾರ ‘ಹಸಿರು ಪಟಾಕಿಯನ್ನಷ್ಟೇ ತರಿಸುವ, ದಾಸ್ತಾನು ಮಾಡುವ ಹಾಗೂ ಮಾರಾಟ ಮಾಡುವುದಾಗಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪಟಾಕಿ ಮಾರಾಟದ ಮಳಿಗೆಗಳಿಗೆ ಅನುಮತಿ ನೀಡಿದೆ. ದೀಪಾವಳಿ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ನಾಗರಿಕರಲ್ಲಿ ಹಣತೆ ಬೆಳಗಿಸಿ , ದೀಪಾವಳಿ ಆಚರಿಸಿ, ಪಟಾಕಿ ತ್ಯಜಿಸಿ- ಮಾಲಿನ್ಯ ತಡೆಯಿರಿ, ಸ್ವಚ್ಛ ದೀಪಾವಳಿ – ಸ್ವಸ್ಥ ದೀಪಾವಳಿ: ಮಾಲಿನ್ಯಮುಕ್ತ ದೀಪಾವಳಿ ಆಚರಿಸೋಣ ಬನ್ನಿ ಎಂಬ ಘೋಷಣೆಯಡಿ ಹಸಿರು ದೀಪಾವಳಿ ಹಬ್ಬ ಆಚರಣೆಯೊಂದಿಗೆ ಪ್ರತಿಜ್ಞೆ ಸ್ವೀಕರಿಸಿ ಜನಜಾಗೃತಿ ಮೂಡಿಸಲಾಗುತ್ತಿದೆ. ಪಟಾಕಿ ಖರೀದಿಗೆ ಖರ್ಚು ಮಾಡುವ ದುಂದು ವೆಚ್ಚವನ್ನು ಮಕ್ಕಳಿಗೆ ಪುಸ್ತಕ, ಬಟ್ಟೆ ಖರೀದಿ, ಪ್ರವಾಸಕ್ಕೆ ತೆರಳಲು ಮತ್ತು ಇನ್ನಿತರ ಉತ್ತಮ ಕೆಲಸಗಳಿಗೆ ಬಳಕೆ ಮಾಡಬಹುದು ಹಾಗೂ ಆಶ್ರಮಗಳು ಮತ್ತು ನಿರ್ಗತಿಕರಿಗೆ ದಾನ ನೀಡುವ ಮೂಲಕ ಸೇವಾ ಕಾರ್ಯ ಮಾಡಬಹುದಾಗಿದೆ. ಹೆಚ್ಚು ಶಬ್ದ ಮತ್ತು ದಟ್ಟ ಹೊಗೆ ಹೊರಹೊಮ್ಮುವ ರಾಸಾಯನಿಕ ಮತ್ತು ಭಾರ ಲೋಹಯುಕ್ತ ಪಟಾಕಿಗಳಿಂದ ಮನುಷ್ಯ ಸೇರಿದಂತೆ ಪ್ರಾಣಿ- ಪಕ್ಷಿಗಳ ಉಸಿರಾಟಕ್ಕೂ ತೊಂದರೆ ಆಗುತ್ತದೆ. ಪಟಾಕಿಯ ಸಿಡಿತದಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ವಿಷಪೂರಿತ ವಾಯು ಮಾಲಿನ್ಯವು ಅದರಲ್ಲೂ ವಯೋವೃದ್ಧರು ಸೇರಿದಂತೆ ಮಕ್ಕಳು, ಅಸ್ತಮಾ, ಹೃದ್ರೋಗವುಳ್ಳವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ.
ಭಾರೀ ಶಬ್ದ ಮಾಡುವ ಪಟಾಕಿಗಳಿಂದ ಪಶು, ಪಕ್ಷಿಗಳಿಗೂ ಕಿರಿಕಿರಿ ಉಂಟಾಗುತ್ತದೆ. ದೀಪಾವಳಿ ಹಬ್ಬದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸರ್ಕಾರ ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಸರ್ಕಾರ ಆದೇಶಿಸಿದೆ. ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಗ್ಗಿಸಿ ಪಟಾಕಿ ಸಿಡಿತದಿಂದ ಸಂಭವಿಸುವ ಅವಘಡಗಳನ್ನು ತಡೆಗಟ್ಟುವ ದಿಸೆಯಲ್ಲಿ ನಾವೆಲ್ಲರೂ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆಗೆ ವಿಶೇಷ ಒತ್ತು ನೀಡಬೇಕಿದೆ. ಹೀಗಾಗಿ ನಾವು ಮಾಲಿನ್ಯಕಾರಿ ಪಟಾಕಿಗಳನ್ನು ತ್ಯಜಿಸಿ ಹಸಿರು ಪಟಾಕಿಗಳನ್ನು ಮಾತ್ರ ಬಳಸುವ ಮೂಲಕ ದೀಪದಿಂದ ದೀಪ ಹಚ್ಚಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಸಂಕಲ್ಪ ತೊಡೋಣ.
ಲೇಖನ: ಟಿ.ಜಿ.ಪ್ರೇಮಕುಮಾರ್,
ಮುಖ್ಯೋಪಾಧ್ಯಾಯರು,
ಸರ್ಕಾರಿ ಪ್ರೌಢಶಾಲೆ,
ಕೂಡುಮಂಗಳೂರು, ಕೊಡಗು ಜಿಲ್ಲೆ. (ಮೊ: 9448588352)