ಮಡಿಕೇರಿ ನ.5 NEWS DESK : ಪಡಿತರ ಚೀಟಿ ಹೊಂದಿರುವವರು ಕಡ್ಡಾಯವಾಗಿ ಜಾತಿ ಮತ್ತು ಆದಾಯ ದೃಢೀಕರಣ ಪತ್ರ ನೀಡಬೇಕೆಂದು ಕೆಲವು ನ್ಯಾಯಬೆಲೆ ಅಂಗಡಿಗಳು ಗ್ರಾಹಕರಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂದು ಕೊಡಗು ಜಿಲ್ಲಾ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಆರೋಪಿಸಿದೆ. ನಗರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಟ್ರೇಡ್ ಯೂನಿಯನ್ ನ ಪ್ರಮುಖರು ಸರ್ಕಾರದ ಆದೇಶದಂತೆ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಒತ್ತಾಯಿಸಿದರು. ಆಹಾರ ಇಲಾಖೆಯ ಯಾವುದೇ ಆದೇಶವಿಲ್ಲದಿದ್ದರೂ ಕೆಲವು ನ್ಯಾಯಬೆಲೆ ಅಂಗಡಿಗಳು ಜಾತಿ ಮತ್ತು ಆದಾಯ ದೃಢೀಕರಣ ಪತ್ರ ತರಬೇಕೆಂದು ಒತ್ತಡ ಹೇರುತ್ತಿವೆ. ಇದರಿಂದ ಬಡವರು ಹಾಗೂ ಕೂಲಿ ಕಾರ್ಮಿಕರು ಮುಂದಿನ ತಿಂಗಳಿನಿಂದ ಅಕ್ಕಿ ಮತ್ತಿತರ ದಿನಸಿ ಸಾಮಾಗ್ರಿ ದೊರೆಯುವುದಿಲ್ಲ ಎನ್ನುವ ಗೊಂದಲದಲ್ಲಿದ್ದು, ಆತಂಕಗೊಂಡಿದ್ದಾರೆ. ಆದ್ದರಿಂದ ಸರ್ಕಾರದ ಆದೇಶವನ್ನು ಮಾತ್ರ ಪಾಲಿಸುವಂತೆ ಮತ್ತು ಗ್ರಾಹಕರಲ್ಲಿ ಗೊಂದಲ ಸೃಷ್ಟಿಸದಂತೆ ನ್ಯಾಯಬೆಲೆ ಅಂಗಡಿಗಳಿಗೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಬೇಕೆಂದು ಯೂನಿಯನ್ ನ ಪ್ರಧಾನ ಕಾರ್ಯದರ್ಶಿ ಎಂ.ಎ.ಅಬ್ದುಲ್ ರಜಾಕ್ ಮನವಿ ಮಾಡಿದರು. ಪಡಿತರ ಚೀಟಿಗೆ ಜಾತಿ ಮತ್ತು ಆದಾಯ ದೃಢೀಕರಣ ಪತ್ರವನ್ನು ಯಾರು ನೀಡಬೇಕೆನ್ನುವುದನ್ನು ಆಹಾರ ಇಲಾಖೆ ಸ್ಪಷ್ಟಪಡಿಸುವುದರ ಮೂಲಕ ಸಾರ್ವಜನಿಕರಲ್ಲಿರುವ ಸಂಶಯಗಳನ್ನು ದೂರ ಮಾಡಬೇಕು. ಪಡಿತರ ಸಾಮಾಗ್ರಿ ಸರಬರಾಜು ಮತ್ತು ವಿತರಣೆಯಲ್ಲಿ ಯಾವುದೇ ಕೊರತೆಗಳು ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಕೋರಿದರು. ಮನವಿಪತ್ರ ಸಲ್ಲಿಸುವ ಸಂದರ್ಭ ಯೂನಿಯನ್ ನ ಜಿಲ್ಲಾಧ್ಯಕ್ಷ ಅಣ್ಣ ಶರೀಫ್, ಕಾರ್ಯದರ್ಶಿ ಅಸೀನಾ ಹಾಗೂ ಸದಸ್ಯರು ಹಾಜರಿದ್ದರು.