ಮಡಿಕೇರಿ ನ.6 NEWS DESK : ಕೊಡಗು ಜಿಲ್ಲಾ ಮರಾಠ-ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ತಾಳತ್ತಮನೆಯ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಧ್ವಜಾರೋಹಣವನ್ನು ಸಂಘದ ಸಂಘಟನ ಕಾರ್ಯದರ್ಶಿ ಎಂ.ಟಿ.ದೇವಪ್ಪ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮರಾಠ-ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್, ಕನ್ನಡ ಭಾಷೆ ಸಂಸ್ಕೃತಿ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು. ಮನೆಯಲ್ಲಿ ಮಕ್ಕಳಿಗೂ ಕನ್ನಡ ಕಲಿಸುವ ಮೂಲಕ ಕನ್ನಡ ಭಾಷೆ ಬೆಳೆಸಬೇಕು. ಪ್ರತಿನಿತ್ಯ ಕನ್ನಡ ಬಳಕೆ ಮೂಲಕ ಕನ್ನಡ ಉಳಿಸಿ ಬೆಳೆಸಲು ಕನ್ನಡಿಗರು ಸದಾ ಬದ್ಧರಾಗಬೇಕು. ಕನ್ನಡ ಭಾಷೆಯು ಪ್ರತಿಯೊಬ್ಬ ಜನಸಾಮಾನ್ಯನು ಅರಿತು, ಬೆರೆತು, ಬಾಳುವ, ಆಡುವ ಸುಂದರ ಭಾಷೆಯಾಗಿದೆ. ಅದರಿಂದ ಕನ್ನಡ ಇಂದು ಶಾಶ್ವತವಾಗಿ ಉಳಿದಿದೆ ಎಂದರು. ಪ್ರತಿಯೊಬ್ಬ ಸದಸ್ಯರು ಸಂಘದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಬೇಕಿದೆ. ಸಂಘದ ಪ್ರತಿ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಮಾಜಿಕ ಕಾರ್ಯಕ್ಕೆ ಪದಾಧಿಕಾರಿಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಕರಾವಳಿ ಮರಾಠ-ಮರಾಟಿ ಸಮಾವೇಶ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನ.9 ಮತ್ತು 10 ರಂದು ಮೂಡಬಿದ್ರೆಯಲ್ಲಿ ನಡೆಯಲಿರುವ ಕರಾವಳಿ ಮರಾಠಿ ಸಮಾವೇಶಕ್ಕೆ ಜಿಲ್ಲೆಯಿಂದ 500ಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜನಾಂಗದ ಏಳಿಗೆಗಾಗಿ ನಡೆಯುತ್ತಿರುವ ಸಮಾವೇಶಕ್ಕೆ ಜಿಲ್ಲೆಯಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷೆ ದೇವಕಿ.ಜಿ.ಆರ್.ನಾಯ್ಕ್, ಕಟ್ಟಡ ಸಮಿತಿ ಅಧ್ಯಕ್ಷ ಎಂ.ಟಿ.ಗುರುವಪ್ಪ, ಮೊಣ್ಣಂಗೇರಿ ಉಪಸಮಿತಿ ಅಧ್ಯಕ್ಷ ವೆಂಕಪ್ಪ, ಪ್ರಮುಖರಾದ ಪೂವಪ್ಪ, ಸುರೇಶ್, ನರಸಿಂಹ ಸೇರಿದಂತೆ ಸಂಘದ ಪದಾಧಿಕಾರಿಗಳು, ಉಪಸಮಿತಿಯ ಪದಾಧಿಕಾರಿಗಳು, ಹಿರಿಯರು, ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಹೂವಮ್ಮ ಸ್ವಾಗತಿಸಿದರೆ, ಮಹಿಳಾ ವೇದಿಕೆ ಅಧ್ಯಕ್ಷೆ ರತ್ನ ಮಂಜರಿ ವಂದಿಸಿದರು.