ಮಡಿಕೇರಿ ನ.6 NEWS DESK : ಕೊಡವ ಜನಪದ ಕಲೆಗಳಿಗೆ ಒತ್ತು ನೀಡುವ ಸಲುವಾಗಿ ಮಡಿಕೇರಿಯ ಸುಬ್ರಮಣ್ಯ ಕೊಡವ ಕೇರಿಯ ನೇತೃತ್ವದಲ್ಲಿ ನ.9 ರಂದು 7ನೇ ಕೊಡವ ಅಂತರ್ಕೇರಿ ಜನಪದ ಸಾಂಸ್ಕೃತಿಕ ಮೇಳವನ್ನು ಆಯೋಜಿಸಲಾಗಿದೆ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕೊಡವ ಸಮಾಜದ ಆವರಣದಲ್ಲಿ ಮಡಿಕೇರಿಯ 12 ಕೇರಿಯ ಕೊಡವ ಜನಾಂಗ ಬಾಂಧವರು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದರು. ಅಂದು ಬೆಳಿಗ್ಗೆ 8.45 ಗಂಟೆಗೆ ಕೊಡವ ಸಮಾಜದಲ್ಲಿ ದೇವರಿಗೆ ಪ್ರಾರ್ಥನೆ ಮತ್ತು ಧ್ವಜಾರೋಹಣ ನೆರವೇರಲಿದೆ. ಸುಬ್ರಹ್ಮಣ್ಯ ಕೊಡವ ಕೇರಿಯ ಸದಸ್ಯ ಕಾಳಿಮಾಡ ನಾಚಪ್ಪ ಮೇಳವನ್ನು ಉದ್ಘಾಟಿಸಲಿದ್ದು, ಹಿರಿಯ ಸದಸ್ಯೆ ನಂದೇಟ್ಟಿರ ಗೌರಮ್ಮ ಮುತ್ತಪ್ಪ ಅಂತರ್ ಕೇರಿ ಜಾನಪದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ನಂತರ ಕೇರಿ ಕೇರಿಗಳ ನಡುವೆ ಬೊಳಕಾಟ್, ಕೋಲಾಟ್, ಮಹಿಳೆಯರ ಉಮ್ಮತಾಟ್, ಕಪ್ಪೆಯಾಟ್, ಬಾಳೋಪಾಟ್, ತಾಲಿಪಾಟ್, ಸಮ್ಮಂದ ಅಡ್‍ಕುವೊ, ವಾಲಗತಾಟ್, ಕೊಡವ ಹಾಡು ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ 3.30 ಗಂಟೆಗೆ ಅಂತರಕೇರಿ ಮೇಳದ ಅಧ್ಯಕ್ಷ ನಾಳಿಯಂಡ ಎಂ.ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾಂರಭ, ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಗೌರವಾಧ್ಯಕ್ಷತೆಯನ್ನು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಮಡಿಕೇರಿ ಕೊಡವ ಸಮಾಜದ ಮಾಜಿ ಅಧ್ಯಕ್ಷ ಕೊಂಗಾಂಡ ಎಸ್.ದೇವಯ್ಯ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಭಾಗವಹಿಸಲಿದ್ದು, ಸನ್ಮಾನಕ್ಕೂ ಭಾಜನರಾಗಲಿದ್ದಾರೆ ಎಂದರು. ಅಂತರ್ ಕೇರಿ ಮೇಳದ ಅಧ್ಯಕ್ಷ ನಾಳಿಯಂಡ ಎಂ.ನಾಣಯ್ಯ ಮಾತನಾಡಿ, ಕೊಡಗಿನ ಕೊಡವ ಜನಪದೀಯ ಪದಗಳಲ್ಲಿ ಹೇಳಲಾಗುವಂತೆ 12 ಕೊಂಬು (ಕಹಳೆ) 35 ನಾಡು ಅರ್ಥಾತ್ ಕೊಡಗು ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿನ ಕೊಡವ ಜನಾಂಗದ ಜನರು ನಾನಾ ಕಾರಣಗಳಿಂದ ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿ ನಗರದ ಬೇರೆ ಬೇರೆ ಬಡಾವಣೆಗಳಲ್ಲಿ ಹಲವಾರು ವರ್ಷಗಳಿಂದ ನೆಲೆ ನಿಂತಿದ್ದಾರೆ. ಹೀಗೆ ವಾಸಿಸಿಕೊಂಡು ಬಂದಿರುವ ನಾವು ಕಷ್ಟ ಕಾರ್ಪಣ್ಯಗಳಿಗೆ ಪರಸ್ಪರ ಸ್ಪಂದಿಸುವ ಸಲುವಾಗಿ ಕೊಡಗಿನ ಮೂಲ ನಿವಾಸಿಗಳಾಗಿ ನಮ್ಮ ಹಿರಿಯ ತಲೆಮಾರಿನವರು ನಮಗೆ ಬಳುವಳಿಯಾಗಿ ನೀಡಿರುವ ನಮ್ಮ ಕೊಡವರ ವಿಶಿಷ್ಟ ಆಚಾರ, ವಿಚಾರ, ಸಂಪ್ರದಾಯ, ಆಚರಣೆ, ಜಾನಪದ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಸಲುವಾಗಿ ಮಡಿಕೇರಿ ನಗರದ ಆಯಾ ವ್ಯಾಪ್ತಿಗೆ ಒಳಪಟ್ಟು ಒಂದೊಂದು ಕೇರಿಯನ್ನು ಹಲವು ವರ್ಷಗಳ ಹಿಂದೆ ಅಸ್ಥಿತ್ವಕ್ಕೆ ತಂದಿರುವುದಾಗಿದೆ. ಆಯಾ ಕೇರಿಯ ಜನಾಂಗ ಬಾಂಧವರು ಒಟ್ಟಿಗೆ ಸೇರಿ ಪರಸ್ಪರ ವಿಚಾರ ವಿನಿಮಯದೊಂದಿಗೆ ತಮ್ಮ ಜಾನಪದ ಕಲೆಗಳಿಗೂ ಒತ್ತು ನೀಡುವ ಚಿಂತನೆಯಲ್ಲಿ ಪ್ರತೀ 3 ವರ್ಷಗಳಿಗೊಮ್ಮೆ “ಅಂತರ ಕೇರಿ ಮೇಳ” ವನ್ನು ಆಚರಿಸುತ್ತಾ ಬಂದಿರುತ್ತೇವೆ. ಆ ಚಿಂತನೆಯ ಫಲವಾಗಿ ಈ ಬಾರಿ 7ನೇ ಕೊಡವ ಅಂತರ ಕೇರಿ ಜಾನಪದ ಸಾಂಸ್ಕೃತಿಕ ಮೇಳ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಪುಲಿಯಂಡ ಕೆ.ಮಾದಪ್ಪ, ಚಾಚಂಗಡ ಕೆ.ಸೀತಮ್ಮ, ಕ್ರೀಡೆಯಲ್ಲಿ ಸಾಧನೆಗೈದಿರುವ ತಾತಪಂಡ ಜ್ಯೋತಿ ಸೋಮಯ್ಯ ಹಾಗೂ ಬೊಳ್ಳಂಡ ಉನ್ನತಿ ಅಯ್ಯಪ್ಪ ಅವರನ್ನು ಗಣ್ಯರು ಸನ್ಮಾನಿಸಲಿದ್ದಾರೆ. ಸಂಜೆ ಮನೋರಂಜನಾ ಕಾರ್ಯಕ್ರಮ ಜರುಗಲಿದ್ದು, ಜಿಲ್ಲೆಯ ಖ್ಯಾತ ಗಾಯಕ ಮಾಳೇಟಿರ ಅಜಿತ್ ತಂಡದವರಿಂದ ಕೊಡವ ಸಂಗೀರ ರಸಮಂಜರಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸುಬ್ರಮಣ್ಯ ಕೊಡವ ಕೇರಿ ಅಧ್ಯಕ್ಷ ಅರೆಯಡ ರಮೇಶ್, ಉಪಾಧ್ಯಕ್ಷ ಕೇಕಡ ಕಿರಣ್, ಸಂಚಾಲಕಿ ಬೊಪ್ಪಂಡ ಸರಳ ಕರುಂಬಯ್ಯ ಹಾಗೂ ಖಜಾಂಚಿ ನಾಟೋಳಂಡ ಪ್ರಕಾಶ್ ಉಪಸ್ಥಿತರಿದ್ದರು.