ಮಡಿಕೇರಿ ನ.6 NEWS DESK : ಕೊಡಗು ಮುಸ್ಲಿಂ ಟ್ರಸ್ಟ್ ಹಾಗೂ ಚಿಲ್ ಬಾಯ್ಸ್ ತಂಡದ ವತಿಯಿಂದ 20ನೇ ವರ್ಷದ “ಮುಸ್ಲಿಂ ಕಪ್” ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ 2025ನೇ ಫೆ.8 ರಿಂದ 16ರ ವರೆಗೆ ಮಡಿಕೇರಿಯಲ್ಲಿ ನಡೆಯಲಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಎ.ಅಬ್ದುಲ್ ಖಾದರ್ ಹಾಗೂ ಚಿಲ್ ಬಾಯ್ಸ್ ನ ಅಧ್ಯಕ್ಷ ಎಂ.ಎ.ಉನೈಸ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾಕೂಟದ ಉಸ್ತುವಾರಿಯನ್ನು “ಚಿಲ್ ಬಾಯ್ಸ್ ಮಡಿಕೇರಿ” ತಂಡ ವಹಿಸಿಕೊಂಡಿದ್ದು, ಪಂದ್ಯಾವಳಿಯನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕ್ರೀಡಾಕೂಟಕ್ಕೆ ಸುಮಾರು 25ಲಕ್ಷ ರೂ.ಗೂ ಅಧಿಕ ಹಣ ಖರ್ಚಾಗುತ್ತಿದ್ದು, ಇಷ್ಟು ವರ್ಷಗಳವರೆಗೆ ಸರ್ಕಾರದಿಂದ ಯಾವುದೇ ಅನುದಾನ ದೊರೆತ್ತಿಲ್ಲ. ಈ ಬಾರಿಯಾದರೂ ಜಿಲ್ಲೆಯ ಇಬ್ಬರು ಶಾಸಕರು ಆಸಕ್ತಿ ತೋರಿ ಸರ್ಕಾರದಿಂದ ಅನುದಾನ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು. ಕಳೆದ ವರ್ಷ ಸುಮಾರು 110 ತಂಡಗಳು ಕ್ರೀಡಾಕೂಟಕ್ಕೆ ಹೆಸರು ನೋಂದಾಯಿಸಿಕೊಂಡಿದ್ದವು. ಈ ಬಾರಿ 130ಕ್ಕೂ ಹೆಚ್ಚು ತಂಡಗಳು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದರು. ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ರೂ.79,999 ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ರೂ.39,999 ಹಾಗೂ ಆಕರ್ಷಕ ಟ್ರೋಫಿ, ತೃತೀಯ ರೂ.19,999 ಹಾಗೂ ಆಕರ್ಷಕ ಟ್ರೋಫಿ ಹಾಗೂ ಚತುರ್ಥ ತಂಡಕ್ಕೆ ರೂ.9999 ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೆ, ಪ್ರತಿ ಪಂದ್ಯದಲ್ಲು ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ನೀಡಲಾಗುವುದು. ಈ ಬಾರಿ ವಿಶೇಷವಾಗಿ ಕೊನೆಯ ದಿನ ಹಗ್ಗಜಗ್ಗಾಟ ಪಂದ್ಯಾವಳಿಯನ್ನು ಕೂಡ ಆಯೋಜಿಸಲಾಗುತ್ತಿದೆ ಎಂದು ಅಬ್ದುಲ್ ಖಾದರ್ ಹಾಗೂ ಎಂ.ಎ.ಉನೈಸ್ ತಿಳಿಸಿದರು. ಹೆಸರು ನೋಂದಾವಣಿಗೆ 2025, ಜ.10 ಕೊನೆಯ ದಿನವಾಗಿದ್ದು, ಪ್ರವೇಶ ಶುಲ್ಕ ರೂ.2 ಸಾವಿರ ವಿಧಿಸಲಾಗಿದೆ. ಆಯಾ ಊರಿನ ಜಮಾಅತ್ ಸದಸ್ಯರಿಗೆ ಮಾತ್ರ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಹೆಚ್ಚಿನ ಮಾಹಿತಿಗೆ ಉನೈಸ್ – 9741091808, ಹಂಝಾ – 9845559131, ಜಂಶೀರ್-8971806657 ನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು. ಇದೇ ಸಂದರ್ಭ ಕೊಡಗು ಮುಸ್ಲಿಂ ಸ್ಪೋಟ್ರ್ಸ್ ಟ್ರಸ್ಟ್ ನ ಪದಾಧಿಕಾರಿಗಳು ಕ್ರೀಡಾಕೂಟದ ಧ್ವಜವನ್ನು ಚಿಲ್ ಬಾಯ್ಸ್ ನ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಸ್.ಆದಂ, ಗೌರವ ಅಧ್ಯಕ್ಷ ಕೆ.ಎ.ಅಬ್ದುಲ್ ರಶೀದ್, ನಿರ್ದೇಶಕರಾದ ಹ್ಯಾರಿಸ್ ಎಂ.ಎಂ ಹಾಗೂ ಉಮೈದ್ ಉಪಸ್ಥಿತರಿದ್ದರು.