ಪೊನ್ನಂಪೇಟೆ ನ.6 NEWS DESK : ಉನ್ನತ ಶಿಕ್ಷಣದಿಂದ ಸಾಮಾಜಿಕ ಸ್ಥಾನಮಾನ, ಸ್ವಾಭಿಮಾನದ ಬದುಕು ಗಳಿಸಲು ಸಾಧ್ಯ. ಜೊತೆಗೆ ಆರೋಗ್ಯಕರ ಮತ್ತು ಸಂಸ್ಕಾರಕ್ಕೆ ಸಮನಾಗಿರುವ ಉನ್ನತ ಶಿಕ್ಷಣದಿಂದ ಸಮಾಜದ ಸ್ವಾಸ್ಥ್ಯವೂ ಕಾಪಾಡಿಕೊಳ್ಳಬಹುದಾಗಿದೆ. ಆದ್ದರಿಂದ ಇದುವರೆಗೂ ಶಿಕ್ಷಣದಿಂದ ವಂಚಿತರಾಗಿದ್ದ ಹಿಂದುಳಿದ ಸಮುದಾಯದ ಪ್ರತಿಭಾವಂತರು ಹೆಚ್ಚು ಹೆಚ್ಚು ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ತಯಾರಾಗಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಿವೃತ್ತ ಐ.ಪಿ.ಎಸ್. ಅಧಿಕಾರಿ ಯು.ನಿಸಾರ್ ಅಹಮದ್ ಹೇಳಿದರು. ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ) ಆಶ್ರಯದಲ್ಲಿ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪ್ಯಾರಿಸ್ ಸಭಾಂಗಣದಲ್ಲಿ ನಡೆದ ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2024 ವಿತರಣೆ ಮತ್ತು ಸನ್ಮಾನ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಆಧುನಿಕತೆ ಹಾಗೂ ತಂತ್ರಜ್ಞಾನದ ವೇಗದ ಜೊತೆಗೆ ಈಗ ಸ್ಪರ್ಧಾತ್ಮಕತೆಯೂ ಹೆಚ್ಚಿದೆ. ಹಾಗಾಗಿ ಈಗ ಒಬ್ಬ ವ್ಯಕ್ತಿ ಸದಾ ಹೊಸ ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇಂದಿದೆ. ಅದಕ್ಕಾಗಿ ತನ್ನ ಜೀವನದ ಯಾವುದೇ ಸಮಯದಲ್ಲೂ ಕಲಿಕೆ ಎಂಬುದು ನಿರಂತರವಾಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ಪ್ರಸ್ತುತ ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಸೇರ ಬಯಸುವ ವಿದ್ಯಾರ್ಥಿ ದರ ಶೇ. 30 ಕ್ಕಿಂತ ಕಡಿಮೆಯಿದೆ. ಕೌಶಲ್ಯಾಧಾರಿತ ಪ್ರಮಾಣೀಕೃತ ಕಲಿಕೆಗಳು ಉದ್ಯೋಗ ದೊರೆಯುವಲ್ಲಿ ಸಾಕಷ್ಟು ದೊಡ್ಡ ಪಾತ್ರವಹಿಸುತ್ತವೆ. ಆದ್ದರಿಂದ ಜೀವನದಲಿ ಯಶಸ್ವಿ ವ್ಯಕ್ತಿಯಾಗುವುದು ಎಲ್ಲಕಿಂತ ಮೊದಲು ವಿದ್ಯಾರ್ಥಿಗಳ ಆದ್ಯತೆಯಾಗಬೇಕು ಎಂದು ಕರೆ ನೀಡಿದರು. ಪರಿಪೂರ್ಣ ವ್ಯಕ್ತಿತ್ವವನ್ನು ರೂಡಿಸಿಕೊಳ್ಳಲು ಎಲ್ಲರಿಗೂ ಶಿಕ್ಷಣ ಆತ್ಯಗತ್ಯ. ಪ್ರಸ್ತುತ ಕಾಲಘಟ್ಟದಲ್ಲಿ ಮಾನವ ಸಮೂಹ ಸಾಮಾಜಿಕ, ಆರ್ಥಿಕ, ನೈತಿಕ, ಸಾಂಸ್ಕೃತಿಕ ಮೊದಲಾದ ವಿಷಯಗಳತ್ತ ಗಮನಹರಿಸಿ ವಿಶೇಷವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಲು ಉನ್ನತ ಶಿಕ್ಷಣ ಅನಿವಾರ್ಯ ಎಂದು ಅಭಿಪ್ರಾಯಪಟ್ಟ ಯು. ನಿಸಾರ್ ಅಹಮದ್, ಜೀವನ ಮಟ್ಟವನ್ನು ಸುಧಾರಿಸಿ ಉನ್ನತಿಯೆಡೆಗೆ ಕೊಂಡೊಯ್ಯಲು ಎಲ್ಲಾ ರೀತಿಯ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಶಿಕ್ಷಣವು ವ್ಯಕ್ತಿಯ ಜೀವನದ ಗುಣಮಟ್ಟವನ್ನು ಖಂಡಿತವಾಗಿ ನಿರ್ಧರಿಸುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಶಿಕ್ಷಣ ವ್ಯಕ್ತಿತ್ವದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಕೊಡಗುಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷರಾದ ಚಪ್ಪಂಡ ಹರೀಶ್ ಉತ್ತಯ್ಯ ಮಾತನಾಡಿ, ಸಭೆ ಸಮಾರಂಭಗಳಲ್ಲಿ ಜನರನ್ನು ಆಕರ್ಷಿಸಲು ಸಿನಿಮಾ ತಾರೆಗಳಿಗೆ ಆದ್ಯತೆ ನೀಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ದೇಶಭಕ್ತಿ, ತ್ಯಾಗ ಮತ್ತು ಬದ್ಧತೆಯಿಂದ ರಾಷ್ಟ್ರಸೇವೆಗೈದ ಯೋಧರನ್ನು ಪರಿಗಣಿಸಿ ಅವರಿಗೆ ಗೌರವ ನೀಡಿದರೆ ಅದು ಇಡೀ ದೇಶದ ಯೋಧರಿಗೆ ನೀಡಿದ ಗೌರವವಾಗುತ್ತದೆ. ಈ ಕಾರ್ಯವನ್ನು ಮಾಡಿದ ಕೊಡವ ಮುಸ್ಲಿಂ ಅಸೋಸಿಯೇಷನ್ ಸಂಘಟನೆ ಅಭಿನಂದನಾರ್ಹ ಎಂದು ಶ್ಲಾಘಿಸಿದರು. ಸಮಾರಂಭವನ್ನು ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ, ಕಿತ್ತಳೆನಾಡು ಕನ್ನಡ ವಾರಪತ್ರಿಕೆಯ ಪ್ರಧಾನ ಸಂಪಾದಕ ಕುವೇಂಡ ವೈ. ಹಂಝತುಲ್ಲಾ ಅವರು ಸಾಂಪ್ರದಾಯಿಕ ದಫ್ ಭಾರಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಎಡಿಜಿಪಿ ಜಿ.ಎಂ. ಹಯಾತ್ ಮಾತನಾಡಿದರು. ವೇದಿಕೆಯಲ್ಲಿ ಕೆ.ಎಂ. ಎ. ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು, ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ನಿರ್ದೇಶಕರಾದ ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಹಾಜಿ ಮೊದಲಾದವರು ಉಪಸ್ಥಿತರಿದ್ದರು. ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶುಭ ಕೋರಿ ಕಳಿಸಿದ್ದ ಸಂದೇಶ ಪತ್ರವನ್ನು ಸಮಾರಂಭದಲ್ಲಿ ವಾಚಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊದಲಿಗೆ ಕೋಳುಮಂಡ ಮೊಹಮ್ಮದ್ ಸಿನಾನ್ ಖಿರಾಹತ್ ಪಠಿಸಿದರು. ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್ ಸ್ವಾಗತಿಸಿದರು. ಈತಲತಂಡ ರಫೀಕ್ ತೂಚಮಕೇರಿ, ದುದ್ದಿಯಂಡ ಮುಸ್ಕಾನ್ ಸೂಫಿ, ಕರತೊರೆರ ಶರ್ಪುದ್ದೀನ್ ಮತ್ತು ಅಕ್ಕಳತಂಡ ಫಿದಾ ಸಾನಿಯ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕರಾದ ಪೊಯಕೆರ ಎಸ್. ರಫೀಕ್ ವಂದಿಸಿದರು.