ವಿರಾಜಪೇಟೆ ನ.7 NEWS DESK : ಮಡಿಕೇರಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ವಿರಾಜಪೇಟೆ ಕಾವೇರಿ ಕಾಲೇಜಿನ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ವಿರಾಜಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗುಂಪು ನೃತ್ಯ ಪ್ರದರ್ಶಿಸಿ, ಏಡ್ಸ್ ಭಾದಿತ ವ್ಯಕ್ತಿಗೆ ಬಳಸಿದ ಸೂಜಿಯನ್ನು ಇತರರು ಬಳಸುವುದರಿಂದ ಹೇಗೆ ಏಡ್ಸ್ ಹರಡುತ್ತದೆ, ಏಡ್ಸ್ ಹರಡದಂತೆ ವಹಿಸ ಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಹಾಗೂ ಏಡ್ಸ್ ಭಾದಿತರನ್ನು ಸಮಾಜದಲ್ಲಿ ಕೀಳಾಗಿ ನೋಡಬಾರದು, ನಮ್ಮಂತೆ ಮನುಷ್ಯರು ಸಮಾಜದಲ್ಲಿ ಅವರಿಗೂ ಸಮಾನವಾಗಿ ಬದುಕುವ ಹಕ್ಕನ್ನು ನೀಡಬೇಕೆಂಬುದನ್ನು ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಪ್ರದರ್ಶಿಸಿ ಏಡ್ಸ್ ಕುರಿತು ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ವಿರಾಜಪೇಟೆ ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕರಾದ ಚಿಟ್ಟಿಯಪ್ಪ, ವಿರಾಜಪೇಟೆ ಖಾಸಗಿ ಬಸ್ ಚಾಲಕರ ಸಂಘದ ಅಧ್ಯಕ್ಷ ಕುಂಬೆಯಂಡ ಸುರೇಶ್, ಸದಸ್ಯರಾದ ಜ್ಯೂಡಿವ್ಯಾಜ್, ಮಂಜುನಾಥ್, ಕಾಲೇಜಿನ ಉಪನ್ಯಾಸಕರಾದ ಸೋಮಣ್ಣ ನಾಗರಾಜು, ಆಡಳಿತ ಸಿಬ್ಬಂದಿ ಹರೀಶ್ ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಸುನಿಲ್ ಕುಮಾರ್ ಹಾಜರಿದ್ದರು.