ಕುಶಾಲನಗರ ನ.7 NEWS DESK : ಕಾಡಾನೆಗಳಿಂದ ನಿರಂತರವಾಗಿ ಬೆಳೆ ಹಾಗೂ ಸ್ವತ್ತು ನಷ್ಟವಾಗುತ್ತಿದ್ದರೂ ಕೂಡ ಅರಣ್ಯ ಇಲಾಖೆ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಗೆ ತಾಕೀತು ಮಾಡಿ ಬೆಳೆ ನಷ್ಟ ಪರಿಹಾರ ಕೊಡಿಸಬೇಕೆಂದು ಗ್ರಾಮಸಭೆಯಲ್ಲಿ ಏಳನೇ ಹೊಸಕೋಟೆ ಗ್ರಾ.ಪಂ ವ್ಯಾಪ್ತಿಯ ಕೃಷಿಕರು ಒತ್ತಾಯಿಸಿದರು. ಏಳನೇ ಹೊಸಕೋಟೆ ಗ್ರಾ.ಪಂ ಸಭಾಂಗಣದಲ್ಲಿ ಅಧ್ಯಕ್ಷ ಇ.ಬಿ.ಜೋಸೆಫ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ತೊಂಡೂರು, ಕಂಬಿಬಾಣೆ ಹಾಗೂ ಏಳನೇ ಹೊಸಕೋಟೆಯ ರೈತರು ಹಾಗೂ ಸಾರ್ವಜನಿಕರು ಆಗ್ರಹಿಸಿದರು. ಕಾಡಾನೆಗಳ ಹಾವಳಿ ನಿರಂತರವಾಗಿದ್ದರೂ ಕೂಡ ಅರಣ್ಯ ಇಲಾಖೆ ಆನೆಗಳ ತಡೆಗೆ ಯೋಜನೆ ರೂಪಿಸುತ್ತಿಲ್ಲ. ತೊಂಡೂರು ವ್ಯಾಪ್ತಿಯ ಅರಣ್ಯದಂಚಿನಲ್ಲಿ ರೈಲ್ವೆ ಕಂಬಿ ತಡೆಗೋಡೆ ಕಾಮಗಾರಿ ಅಪೂರ್ಣಗೊಂಡಿದೆ. ಕಾಡಾನೆಗಳಿಂದ ಆಗುತ್ತಿರುವ ಬೆಳೆ ನಷ್ಟ ಪರಿಹಾರಕ್ಕಾಗಿ ಕಚೇರಿಗೆ ಅಲೆದು ಚಪ್ಪಲಿ ಸವೆದರೂ ಕೂಡ ಪರಿಹಾರ ಮಾತ್ರ ನಯಾಪೈಸೆ ಬರಲಿಲ್ಲ ಎಂದು ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದರು. ಏಳನೇ ಹೊಸಕೋಟೆಯ ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿ ಯೋಜಿಸಿರುವ ಹೊಸ ಮದ್ಯದ ಅಂಗಡಿ ಆರಂಭಕ್ಕೆ ಪರವಾನಗಿ ನೀಡುವ ವಿಚಾರವಾಗಿ ಕೆಲವರಿಂದ ವಿರೋಧ ವ್ಯಕ್ತವಾದರೆ ಮತ್ತೆ ಹಲವರಿಂದ ಮದ್ಯದಂಗಡಿಗೆ ಪರವಾದ ಚರ್ಚೆಗಳು ನಡೆಯಿತು. ಸ್ಥಳೀಯ ನಿವಾಸಿ ಅಸ್ಲಾಂ ಮತ್ತಿತರರು ರಾಷ್ಟ್ರೀಯ ಹೆದ್ದಾರಿಯಂಚಿನಲ್ಲಿ ಮದ್ಯದಂಗಡಿ ಆರಂಭಕ್ಕೆ ಪಂಚಾಯಿತಿ ಪರವಾನಗಿ ನೀಡಬಾರದು ಎಂದರೆ, ಪಂಚಾಯಿತಿ ಮಾಜಿ ಸದಸ್ಯ ಎ.ಪಿ.ರಮೇಶ್ ಮತ್ತಿತರರು ಏಳನೇ ಹೊಸಕೋಟೆ ಪಂಚಾಯಿತಿಯಲ್ಲಿ ಒಂದೇ ಒಂದು ಸಿಎಲ್ 7 ಮದ್ಯದಂಗಡಿ ಇಲ್ಲ. ಮದ್ಯದಂಗಡಿ ತೆರೆಯಲು ಸಾಧಕ ಬಾಧಕ ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಪರವಾನಗಿ ನೀಡಿದೆ. ಈ ಭಾಗದ ಹಲವು ಮದ್ಯಪ್ರಿಯರು ಸುಂಟಿಕೊಪ್ಪ ಹಾಗೂ ಕುಶಾಲನಗರ ಮತ್ತಿತರೆಡೆಗಳಿಗೆ ನಿತ್ಯವೂ ಹತ್ತಾರು ಕಿ.ಮಿ ಕ್ರಮಿಸುತ್ತಿದ್ದಾರೆ. ಕೆಲವರು ಹೆದ್ದಾರಿಯ ವಾಹನಗಳ ದಟ್ಟಣೆಯಿಂದ ಅಪಘಾತಕ್ಕೆ ಸಿಲುಕಿ ಜೀವವನ್ನು ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯವಾಗಿಯೇ ಮದ್ಯದಂಗಡಿ ಅಗತ್ಯವಿದೆ. ಕಾನೂನಿನ ರೀತಿಯೇ ಯಾರಿಗೂ ಅನಾನುಕೂಲವಾಗದಂತೆ ಮದ್ಯದಂಗಡಿ ತೆರೆಯಬೇಕಿದೆ. ಮದ್ಯದಂಗಡಿಯಿಂದ ಪಂಚಾಯಿತಿಗೂ ಆದಾಯ ಬರುತ್ತದೆ ಎಂದು ಎ.ಪಿ.ರಮೇಶ್ ಮತ್ತಿತರರು ಒತ್ತಾಯಿಸಿದರು. ಸಭಾಧ್ಯಕ್ಷ ಜೋಸೆಫ್ ಮದ್ಯದಂಗಡಿಗೆ ಪರವಾನಗಿ ನೀಡುವ ವಿಚಾರವಾಗಿ ಸದಸ್ಯರೊಂದಿಗೆ ಚರ್ಚಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥರು ಹೆಚ್ಚಿದ್ದು, ಪ್ರಾರ್ಥನಾಲಯಕ್ಕೆ ಕಲ್ಲು ಬೀಸುವುದಲ್ಲದೇ, ಕಂಡ ಕಂಡ ವಾಹನಗಳಿಗೂ ಕಲ್ಲು ತೂರಿ ಹಾನಿಪಡಿಸುತ್ತಿದ್ದಾರೆ. ಈ ಬಗ್ಗೆ ಪೋಲೀಸರಿಗೆ ದೂರು ನೀಡಿದರೆ ಪಂಚಾಯಿತಿಯಿಂದ ಕ್ರಮ ಕೈಗೊಳ್ಳಬೇಕೇ ವಿನಃ ನಾವೇನು ಮಾಡಲಾಗುವುದಿಲ್ಲ ಎನ್ನುತ್ತಾರೆ. ಈ ಬಗ್ಗೆ ಪಂಚಾಯಿತಿ ವತಿಯಿಂದ ಮಾನಸಿಕ ಅಸ್ವಸ್ಥರನ್ನು ಬೇರೆಡೆಗೆ ಸಾಗಿಸಬೇಕು ಎಂದು ಅಸ್ಲಾಂ ಎಂಬವರು ಆಗ್ರಹಿಸಿದಾಗ,ಪಂಚಾಯಿತಿ ಪಿಡಿಒ ನಂದೀಶ ಈ ಬಗ್ಗೆ ಮೇಲಧಿಕಾರಿಯೊಂದಿಗೆ ಚರ್ಚಿಸಿ ಕ್ರಮ ಜರುಗಿಸುವ ಭರವಸೆ ನೀಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲೆಡೆ ಕಾಲುವೆ ಹಾಗೂ ಗುಂಡಿಗಳನ್ನು ತೆಗೆದು ಹಾಗೆಯೇ ಬಿಡಲಾಗಿದೆ. ಹಾಗಾಗಿ ದ್ವಿಚಕ್ರ ವಾಹನಗಳ ಸವಾರರು ಮಳೆಯಿಂದಾಗುವ ಕೆಸರಿನಲ್ಲಿ ಸಿಲುಕಿ ಜಾರಿ ಬೀಳುತ್ತಿದ್ದಾರೆ ಎಂದು ನಿವಾಸಿ ಸುಬ್ರಾಯ ಎಂಬವರು ದೂರಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ಬೀದಿ ದೀಪಗಳ ಸಮರ್ಪಕವಾದ ನಿರ್ವಹಣೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ನೋಡಲ್ ಅಧಿಕಾರಿ ಸೋಮಯ್ಯ ಮಾತನಾಡಿ, ಗ್ರಾಮ ಸಭೆಯಲ್ಲಿ ಹಿಂದಿನ ಗ್ರಾಮಸಭೆಗಳ ನಡವಳಿಗಳನ್ನು ಓದಿ ಹೇಳುವ ಮೂಲಕ ಅದರ ಮೇಲೆ ಚರ್ಚೆಗಳಾಗಬೇಕು. ಕೆಲಸ ಕಾರ್ಯಗಳನ್ನು ಬದಿಗೊತ್ತಿ ಗ್ರಾಮಸಭೆಗೆ ಬರುವ ಸಾರ್ವನಿಕರನ್ನು ಗೌರವದಿಂದ ಕಾಣುವಂತಾಗಬೇಕು. ಪಂಚಾಯಿತಿ ವ್ಯಾಪ್ತಿಯ ಶಾಲೆಗಳು ಹಾಗೂ ಅಂಗನವಾಡಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಅಗತ್ಯವಾದ ಅನುದಾನಗಳನ್ನು ನೀಡುವಂತಾಗಬೇಕು ಎಂಬಿತ್ಯಾದಿ ಸಲಹೆಗಳನ್ನು ನೀಡಿದರು. ಸಭೆಯಲ್ಲಿ ಸಾರ್ವಜನಿಕರು ಚರ್ಚಿಸಿದ ವಿಚಾರಗಳನ್ನು ಅಭಿವೃದ್ದಿಗೆ ಪೂರಕವಾಗಿ ಮನಗಂಡು ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಭಾಧ್ಯಕ್ಷ ಜೋಸೆಫ್ ಹೇಳಿದರು. ಪಂಚಾಯಿತಿ ಉಪಾಧ್ಯಕ್ಷೆ ಸೌಮ್ಯಶ್ರೀ, ಸದಸ್ಯರಾದ ಕೆ.ಎಂ. ರಮೇಶ್, ಮಧುಸೂದನ್, ಸಿದ್ದಿಕಿ, ಮುಸ್ತಾಫ, ಚಂದ್ರಾವತಿ, ಕಮಲಾ, ಸಿಂಧೂ, ವೇದಾವತಿ ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಿ.ಸಿ.ನದೀಶ್ ಇದ್ದರು.