ಮಡಿಕೇರಿ ನ.8 NEWS DESK : ಉಡುಪಿ ಜಿಲ್ಲಾ ಕಿವುಡರ ಕ್ಷೇಮಾಭಿವೃದ್ಧಿ ಸಂಘದ 10ನೇ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು.
ಉಡುಪಿ ಅಜ್ಜರಕಾಡು ಶ್ರೀ ಲಕ್ಷ್ಮೀ ನಾರಾಯಣ ರಾವ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಉದ್ಘಾಟಿಸಿದರು. ಉಡುಪಿ ವಿಕಲಚೇತನರ ಸಬಲೀಕರಣ ಹಿರಿಯ ನಾಗರೀಕರ ಇಲಾಖೆಯ ಕಲ್ಯಾಣಾಧಿಕಾರಿ ರತ್ನ ಸುವರ್ಣ ಮಾತನಾಡಿ ವಿಕಲಚೇತನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷೆ ಗೌರು ಎಂ.ಸೋಮಣ್ಣ, ಉಪಾಧ್ಯಕ್ಷ ಶಂಕರ ನಾರಾಯಣ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಸ್ಥೆಗಳ ಒಕ್ಕೂಟ, 25 ಜಿಲ್ಲಾ ಕಿವುಡರ ಸಂಸ್ಥೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ನಂತರ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ನ.17 ರಂದು ರಾಮನಗರ, ಡಿಸೆಂಬರ್ ತಿಂಗಳಿನಲ್ಲಿ ಹಾಸನ, ಮೈಸೂರು ಹಾಗೂ ಕೋಲಾರದಲ್ಲಿ 10ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ.