ಮಡಿಕೇರಿ ನ.11 NEWS DESK : ಕನ್ನಡ ಉಪ ಭಾಷೆಯಾದ ಅರೆಭಾಷೆ ಉಳಿಸಿ ಬೆಳೆಸುವಂತಾಗಲು ಕನ್ನಡ ಭಾಷೆ ಜೊತೆಗೆ ಅರೆಭಾಷೆಯನ್ನೂ ಕಲಿಯಬೇಕು ಎಂದು ಗಣ್ಯರು ಪ್ರತಿಪಾದಿಸಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಚೆಯ್ಯಂಡಾಣೆಯ ನರಿಯಂದಡ ಅಯ್ಯಪ್ಪ ಯುವಕ ಸಂಘ ಸಹಕಾರದಲ್ಲಿ ಚೆಯ್ಯಂಡಾಣೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ನಡೆದ ‘ಅರೆಭಾಷೆ ಗಡಿನಾಡ ಉತ್ಸವ’ ಕಾರ್ಯಕ್ರಮದಲ್ಲಿ ಗಣ್ಯರು ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಷ್ಟ್ರದಲ್ಲಿ ಅನೇಕ ಭಾಷೆ ಮತ್ತು ಉಪ ಭಾಷೆಗಳಿದ್ದು, ಕನ್ನಡದ ಉಪ ಭಾಷೆಯಲ್ಲಿ ಅರೆಭಾಷೆಯೂ ಒಂದಾಗಿದೆ. ಕನ್ನಡ ಭಾಷೆ ಜೊತೆಗೆ ಅರೆಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಜತೆಗೆ ಅರೆಭಾಷೆಯನ್ನು ಪ್ರೋತ್ಸಾಹಿಸಬೇಕಿದೆ ಎಂದು ಸಂಸದರು ಹೇಳಿದರು. ಭಾರತದಲ್ಲಿ ಅನೇಕ ಭಾಷೆಗಳಿದ್ದು, ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಜೊತೆಗೆ ಜೊತೆಗೆ ಅರೆಭಾಷೆಯನ್ನು ಮಾತನಾಡುವಂತಾಗಬೇಕು ಎಂದರು. ಪ್ರತಿಯೊಬ್ಬರೂ ಮುಂದಿನ ಪೀಳಿಗೆಗೆ ಹಾಗೂ ರಾಷ್ಟ್ರದ ಏಕತೆಗಾಗಿ ಕೈಜೋಡಿಸಬೇಕು ಎಂದು ಯದುವೀರ್ ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು. ಕೊಡಗು ಜಿಲ್ಲೆಯ ಜನರು ಭಾರತ ದೇಶಕ್ಕೆ ತಮ್ಮದೇ ಆದ ಕೊಡಗೆ ನೀಡಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಸಂಸದರು ನುಡಿದರು. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಅರೆಭಾಷೆ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಇದರಿಂದ ನಾಡಿನ ಸಣ್ಣ ಸಣ್ಣ ಭಾಷಿಕರ ಸಂಸ್ಕೃತಿ ಉಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಭಾಷೆ ಇದ್ದಲ್ಲಿ ಜನಾಂಗ ಉಳಿಯುತ್ತದೆ. ಭಾಷೆ ಮಾತನಾಡದಿದ್ದಲ್ಲಿ ಜನಾಂಗವೂ ಇಲ್ಲದಾಗುತ್ತದೆ. ಆದ್ದರಿಂದ ಮುಂದಿನ ಪೀಳಿಗೆಯ ಮಕ್ಕಳಿಗೆ ಅರೆಭಾಷೆಯನ್ನು ಕಲಿಸುವಂತಾಗಬೇಕು ಎಂದು ಸಲಹೆ ಮಾಡಿದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದೆ. ಕನ್ನಡ ಭಾಷೆ ಉಳಿದಲ್ಲಿ, ಅದರ ಉಪ ಭಾಷೆಗಳು ಉಳಿಯಲು ಸಾಧ್ಯ, ಆ ದಿಸೆಯಲ್ಲಿ ವಿವಿಧ ಅಕಾಡೆಮಿಗಳ ಮೂಲಕ ಭಾಷೆ, ಸಂಸ್ಕೃತಿ, ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹೇಳಿದರು.’ ನಾಡಿನ ಸ್ಥಳೀಯ ಭಾಷೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪಸರಿಸುವಂತಾಗಬೇಕು. ಸಣ್ಣ ಸಣ್ಣ ಭಾಷಿಕರು ಉತ್ತಮ ಭವಿಷ್ಯ ರೂಪಿಸಿಕೊಳ್ಳು ಮುಂದಾಗಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಕರೆ ನೀಡಿದರು.
ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಹಿಂದಿನಿಂದಲೂ ಉಳಿಸಿಕೊಂಡು ಬಂದಿರುವ ಅರೆಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ನಮ್ಮ ನಮ್ಮ ಮಾತೃ ಭಾಷೆ ಮಾತನಾಡಿದರೆ ಅದರಂತ ಸಂತಸ ಮತ್ತೊಂದಿಲ್ಲ, ಆದ್ದರಿಂದ ಸ್ಥಳೀಯ ಭಾಷೆ ಮತ್ತು ಸಂಪ್ರದಾಯ ಮರೆಯಬಾರದು ಎಂದರು. ಜಿಲ್ಲೆಯಲ್ಲಿರುವ ಅಕಾಡೆಮಿಗಳಿಗೆ ಸರ್ಕಾರದಿಂದ ಎಲ್ಲಾ ರೀತಿಯ ಅಗತ್ಯ ಸಹಕಾರ, ಪ್ರೋತ್ಸಾಹ ನೀಡಲಾಗುವುದು ಎಂದು ಡಾ.ಮಂತರ್ ಗೌಡ ಅವರು ತಿಳಿಸಿದರು. ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಕೇರಳ ಗಡಿ ಭಾಗಕ್ಕೆ ಹತ್ತಿರ ಇರುವ ಚೆಯ್ಯಂಡಾಣೆಯಲ್ಲಿ ಅರೆಭಾಷೆ ಗಡಿನಾಡ ಉತ್ಸವ ಆಯೋಜಿಸಿರುವುದು ಉಪಯುಕ್ತವಾಗಿದೆ ಎಂದರು. ಅರೆಭಾಷೆ ಆಚಾರ, ವಿಚಾರ ಮತ್ತು ಸಂಸ್ಕೃತಿಯನ್ನು ಪಸರಿಸುವಲ್ಲಿ ಅರೆಭಾಷೆ ಗಡಿನಾಡ ಉತ್ಸವ ಸಹಕಾರಿ ಆಗಿದೆ ಎಂದರು. ಅರೆಭಾಷೆ ಆಚಾರ, ವಿಚಾರ ಮತ್ತು ಸಂಸ್ಕೃತಿ ಉಳಿಯಬೇಕು. ಭಾಷೆ ಉಳಿದಲ್ಲಿ ಸಂಸ್ಕೃತಿ ಉಳಿಯುತ್ತದೆ ಎಂದು ಕೆ.ಜಿ.ಬೋಪಯ್ಯ ಅವರು ನುಡಿದರು. ಅರೆಭಾಷೆ ಅಕಾಡೆಮಿಯ ಉದ್ದೇಶ ಈಡೇರಬೇಕು,
ಅರೆಭಾಷಿಕರನ್ನು ಒಟ್ಟುಗೂಡಿಸಿಕೊಂಡು ಹೋಗಬೇಕು. ಇತರರಿಗೆ ಮಾದರಿಯಾಗಿ ನಡೆದುಕೊಳ್ಳಬೇಕು ಎಂದು ಕೆ.ಜಿ.ಬೋಪಯ್ಯ ಅವರು ಸಲಹೆ ಮಾಡಿದರು. ಮಡಿಕೇರಿ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಕೊಟ್ಟಕೇರಿಯನ ದಯಾನಂದ ಅವರು ಮಾತನಾಡಿ ಯಾವುದೇ ಭಾಷೆ ಎಲ್ಲರ ಅವಿಭಾಜ್ಯ ಅಂಗವಾಗಿದ್ದು, ಭಾಷೆ ಅಭಿವ್ಯಕ್ತಪಡಿಸುವ ಮಾಧ್ಯಮವೂ ಆಗಿದೆ ಎಂದು ನುಡಿದರು. ‘ಅವ್ವ ಭಾಷೆಯೂ ಕರುಳಿನದ್ದಾಗಿದ್ದು, ಮಾತೃ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಇತರೆ ಭಾಷೆಗಳನ್ನು ಗೌರವಿಸಬೇಕು ಎಂದರು. “ಅರೆಭಾಷೆಯು ಕನ್ನಡದ ಉಪ ಭಾಷೆಯಾಗಿದ್ದು, ಕನ್ನಡ ಭಾಷೆ ಉಳಿದರೆ ಮಾತ್ರ ಅರೆಭಾಷೆ ಉಳಿಯಲು ಸಾಧ್ಯ ಎಂಬುದನ್ನು ಯಾರೂ ಮರೆಯಬಾರದು, ಆದ್ದರಿಂದ ಕನ್ನಡದ ಜತೆಗೆ ಅರೆಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಕೊಟ್ಟಕೇರಿಯನ ದಯಾನಂದ ಅವರು ನುಡಿದರು.” ಮಕ್ಕಳಿಗೆ ಕನ್ನಡದ ಜೊತೆಗೆ ಅರೆಭಾಷೆ ಕಲಿಸಬೇಕು. ಗಟ್ಟಿಯಾಗಿ ಮಾತನಾಡಬೇಕು. ಯಾವುದೇ ಕಾರಣಕ್ಕೂ ಹಿಂಜರಿಕೆ ಬೇಡ ಎಂದರು. ಆಕಾಶವಾಣಿಯಲ್ಲಿ ‘ಸುದ್ದಿ ಜೊಂಪೆ’ ಪ್ರಸಾರದ ನಂತರ ಎಲ್ಲೆಡೆ ಅರೆಭಾಷೆ ಪಸರಿಸಲು ಸಹಕಾರಿ ಆಯಿತು. ಹಾಗೆಯೇ ಅಕಾಡೆಮಿ ಆರಂಭದ ನಂತರ ಭಾಷೆ, ಸಾಹಿತ್ಯ ಚಟುವಟಿಕೆಗಳು ಹೆಚ್ಚಾದವು, ಮಡಿಕೇರಿಯಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ನಿರ್ಮಿಸಿದ ನಂತರ ಮತ್ತಷ್ಟು ಗೌರವ ಹೆಚ್ಚಾಯಿತು ಎಂದು ಕೊಟ್ಟಕೇರಿಯನ ದಯಾನಂದ ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು. ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಅಕಾಡೆಮಿ ಉದ್ದೇಶ, ಕಾರ್ಯಚಟುವಟಿಕೆ ಮತ್ತಿತರ ಬಗ್ಗೆ ಮಾಹಿತಿ ನೀಡಿದರು. ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮದ ಹಿರಿಯರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ವಿವಿಧ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಚೆಯ್ಯಂಡಾಣೆ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷರಾದ ಹರಿಪ್ರಸಾದ್ ಬೆಳ್ಳಿಯಂಡ್ರ, ಮೈಸೂರು ಗೌಡ ಸಮಾಜದ ಮಾಜಿ ಅಧ್ಯಕ್ಷರಾದ ತೋಟಂಬೈಲು ಮನೋಹರ್, ಕೆದಮುಳ್ಳೂರು ಗ್ರಾ.ಪಂ.ಮಾಜಿ ಸದಸ್ಯರಾದ ಗೌಡುಧಾರೆ ಚೋಟು ಬಿದ್ದಪ್ಪ, ಅಕಾಡೆಮಿ ಸದಸ್ಯರಾದ ವಿನೋದ್ ಮೂಡಗದ್ದೆ, ಚಂದ್ರಶೇಖರ ಪೇರಾಲು, ನಿಡ್ಯಮಲೆ ಜ್ಞಾನೇಶ್, ಲತಾ ಪ್ರಸಾದ್ ಕುದ್ಪಾಜೆ, ಪಿ.ಎಸ್.ಕಾರ್ಯಪ್ಪ, ಲೋಕೇಶ್ ಊರುಬೈಲು, ಪೊನ್ನಚ್ಚನ ಮೋಹನ್, ಕುದುಪಜೆ ಪ್ರಕಾಶ್ ಇತರರು ಇದ್ದರು.