ಮಡಿಕೇರಿ ನ.14 NEWS DESK : ವಕ್ಫ್ ನೋಟಿಸ್ ವಿಚಾರದಲ್ಲಿ ಬಿಜೆಪಿ ವಿರುದ್ಧ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಡಿರುವ ಆರೋಪಗಳಲ್ಲಿ ಸತ್ಯಾಂಶಗಳಿಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವೇ ಈ ಗೊಂದಲಗಳಿಗೆ ನೇರ ಹೊಣೆ ಎಂದು ಕೊಡಗು ಜಿಲ್ಲಾ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವಕ್ಫ್ ನೋಟಿಸ್ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಅಶಾಂತಿ ಮೂಡಿಸುತ್ತಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ, ವಕ್ಫ್ ಸಚಿವ ಜಮೀರ್ ಅಹಮ್ಮದ್ ಅವರು ಬಿಜೆಪಿ ಸಚಿವರೇ ಎಂದು ಪ್ರಶ್ನಿಸಿದರು. ಬಡವರ ಹಾಗೂ ರೈತರ ಪರ ಬಿಜೆಪಿ ಸದಾ ಹೋರಾಟ ನಡೆಸುತ್ತದೆ. ಇನ್ನು ಮುಂದೆಯೂ ಹೋರಾಟವನ್ನು ನಡೆಸಲಿದೆ, ಜನರಿಂದ ಕಾಂಗ್ರೆಸ್ ಪಕ್ಷ ತಿರಸ್ಕರಿಸಲ್ಪಡುತ್ತಿರುವುದರಿಂದ ಹತಾಶಗೊಂಡಿರುವ ಕಾಂಗ್ರೆಸ್ಸಿಗರು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. ವಕ್ಫ್ ನೋಟೀಸ್ ನೀಡಿರುವುದು ಅಧಿಕಾರಿಗಳು, ಸರ್ಕಾರದ ತಪ್ಪಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸಮಜಾಯಿಷಿಕೆ ನೀಡಿದ್ದಾರೆ. ಹಾಗಾದರೆ ಅಧಿಕಾರಿಗಳು ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿ ಇಲ್ಲವೇ, ಈ ರೀತಿಯ ಸರ್ಕಾರದ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ತಲೆತಲಾಂತರಗಳಿಂದ ಕೃಷಿ ಮಾಡಿಕೊಂಡು ಬರುತ್ತಿರುವ ರೈತರಿಗೆ ನೋಟೀಸ್ ನೀಡಲಾಗಿದೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಜಮೀರ್ ಅಹಮ್ಮದ್ ಅವರು ಸಭೆಗಳಲ್ಲಿ ಹೇಳಿಕೊಂಡಿದ್ದಾರೆ. ಸರ್ಕಾರದ್ದೇ ತಪ್ಪುಗಳಿದ್ದರೂ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವುದು ಖಂಡನೀಯ. ಬಿಜೆಪಿ ಸರ್ಕಾರವಿದ್ದಾಗ ವಕ್ಫ್ ಆಸ್ತಿ ದುರುಪಯೋಗ ಮಾಡಿದವರಿಗೆ ನೋಟೀಸ್ ನೀಡಲಾಗಿದೆಯೇ ಹೊರತು ಅಮಾಯಕ ರೈತರಿಗೆ ನೋಟೀಸ್ ನೀಡಿಲ್ಲ. ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರವೇ ಅಶಾಂತಿಗೆ ಕಾರಣವಾಗುತ್ತಿದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಮತ್ತು ಜಿಲ್ಲೆಯಲ್ಲಿ ಸಾಮರಸ್ಯದ ವಾತಾವರಣವಿತ್ತು. ಎಲ್ಲಾ ವಿಚಾರಗಳಲ್ಲಿ ವೈಫಲ್ಯ ಕಂಡಿರುವ ಸರ್ಕಾರಕ್ಕೆ ಕನಿಷ್ಠ ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ವಕ್ಫ್ ವಿಚಾರದಲ್ಲಿ ಗೊಂದಲ ಸೃಷ್ಟಿಸದೆ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆಯನ್ನು ಒಪ್ಪಿಕೊಳ್ಳಲಿ. ಕೊಡಗು ಕಾಂಗ್ರೆಸ್ಸಿಗರು ಮೊದಲು ಜಿಲ್ಲೆಯ ರಸ್ತೆಗಳ ಗುಂಡಿ ಮುಚ್ಚಿಸಿ ನಂತರ ಮಾತನಾಡಲಿ ಎಂದು ನಾಪಂಡ ರವಿ ಕಾಳಪ್ಪ ಒತ್ತಾಯಿಸಿದರು. ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಅವಧಿಯ 10 ವರ್ಷಗಳಲ್ಲಿ ಮತ್ತು ಬಿಜೆಪಿಯ ಮಾಜಿ ಶಾಸಕರುಗಳು ಕಳೆದ 25 ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆಗೆ ಬಿಜೆಪಿ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್ ಮಾತನಾಡಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮೊದಲು ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಸಲಹೆ ನೀಡಲಿ ಎಂದು ವ್ಯಂಗ್ಯವಾಡಿದರು. ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದ ಅವಧಿಯಲ್ಲೇ ಹೆಚ್ಚು ಗಲಭೆಗಳಾಗಿವೆ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಲನ್ ಕುಮಾರ್, ವಿರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ ಹಾಗೂ ಮಡಿಕೇರಿ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ ಉಪಸ್ಥಿತರಿದ್ದರು.