ಮಡಿಕೇರಿ ನ.18 NEWS DESK : ಕೊಡಗು ಬ್ಲಡ್ ಡೋನರ್ಸ್‍ನ 7ನೇ ವಾರ್ಷಿಕೋತ್ಸವದ ಪ್ರಯುಕ್ತ ನ.21 ರಂದು ಮಡಿಕೇರಿಯಲ್ಲಿ ರಕ್ತದಾನ ಮತ್ತು ಕಣ್ಣು ತಪಾಸಣಾ ಶಿಬಿರ ನಡೆಯಲಿದೆ ಎಂದು ಬ್ಲಡ್ ಡೋನರ್ಸ್ ಅಧ್ಯಕ್ಷ ಪಿ.ಪಿ.ಸುಕುಮಾರ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ರೋಟರಿ, ನೇತ್ರ ಆಫ್ಟಿಕಲ್ಸ್, ಹೆಚ್.ಡಿ.ಎಫ್.ಸಿ ಬ್ಯಾಂಕ್ ಸಹಭಾಗಿತ್ವದಲ್ಲಿ ನಗರದ ರೋಟರಿ ಹಾಲ್‍ನಲ್ಲಿ ಬೆಳಿಗ್ಗೆ 9.30 ರಿಂದ 1.30ರ ವರೆಗೆ ಶಿಬಿರ ನಡೆಯಲಿದ್ದು, ಜಿಲ್ಲೆಯ ಜನತೆ ಹಾಗೂ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಕಣ್ಣು ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡ ಅರ್ಹ ಪಲಾನುಭವಿಗಳಿಗೆ 199 ರೂ.ಗಳಿಗೆ ಕನ್ನಡಕ ನೀಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಕಾರ್ಯದರ್ಶಿ ಮೈಕಲ್ ವೇಗಸ್ ಮಾತನಾಡಿ, ಅಂದು ಬೆಳಗ್ಗೆ 9.30 ಗಂಟೆಗೆ ನಡೆಯುವ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಡ್ ಡೋನರ್ಸ್ ಅಧ್ಯಕ್ಷ ಪಿ.ಪಿ.ಸುಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಹೆಚ್.ಟಿ.ಅನಿಲ್, ಮಡಿಕೇರಿ ರೋಟರಿ ಅಧ್ಯಕ್ಷ ಸುದಯ್ ನಾಣಯ್ಯ, ಹೆಚ್.ಡಿ.ಎಫ್.ಸಿ ಬ್ಯಾಂಕ್ ಮ್ಯಾನೇಜರ್ ನಾರಾಯಣ ರಾಜೇಂದ್ರ, ನೇತ್ರ ಆಫ್ಟಿಕಲ್ಸ್‍ನ ಮಾಲೀಕ ಅಫ್ಫಾನ್, ಜಿಲ್ಲಾ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ.ಕರುಂಬಯ್ಯ, ಬ್ಲಡ್ ಡೋನರ್ಸ್ ಸಂಸ್ಥಾಪಕ ಮೊಹಮ್ಮದ್ ಅಂಜುಮ್, ನಿಕಟ ಪೂರ್ವ ಅಧ್ಯಕ್ಷ ಖಲೀಕ್, ಕಾರ್ಯನಿರ್ವಾಹಕರಾದ ಇಫಾರ್ ಬನ್ನೂರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ಲಡ್ ಡೋನರ್ಸ್ ಉಪಾಧ್ಯಕ್ಷ ಎಂ.ವಿ.ಅಶ್ರಫ್, ಕಾರ್ಯನಿರ್ವಾಹಕ ಎಂ.ಎ.ಉನೈಸ್, ಸ್ಥಾಪಕರಾದ ಅಂಜುಮ್, ಸಲಹೆಗಾರ ಡೇವಿಡ್ ವೇಗಸ್ ಉಪಸ್ಥಿತರಿದ್ದರು.