ಮಡಿಕೇರಿ ನ.19 NEWS DESK : ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ, ಕೊಳಕೇರಿ ವಿವಿಧೊದ್ಧೇಶ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ‘ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವ’ ದಿನಾಚರಣೆಯನ್ನು ವೆಸ್ಟ್ ಕೊಳಕೇರಿಯ ಭಗವತಿ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ, 1905 ರಲ್ಲಿ ಗದಗಿನ ಕಣಗಿನಹಾಳ ಗ್ರಾಮದಲ್ಲಿ ಶಿದ್ದನಗೌಡ ಸಂಣರಾಮನಗೌಡ ಪಾಟೀಲರು ಪ್ರಪ್ರಥಮ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸುವುದರ ಮೂಲಕ ಪ್ರಾರಂಭಗೊಂಡ ಕ್ರಾಂತಿ ಇಂದು ಎಲ್ಲಾ ವಿಧಧ ಸಹಕಾರ ಸಂಘವನ್ನು ಸ್ಥಾಪಿಸುವಷ್ಟರ ಮಟ್ಟಿಗೆ ಬೆಳೆದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕೊಳಕೇರಿ ಸಹಕಾರ ದವಸ ಭಂಡಾರವು ಸಹಕಾರ ಸಪ್ತಾಹವನ್ನು ಆಚರಿಸುತ್ತಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದರು. ಸಹಕಾರ ದವಸ ಭಂಡಾರವನ್ನು ಭತ್ತದ ರೂಪದಲ್ಲಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು. ಅಂದು ತುತ್ತು ಅನ್ನಕ್ಕೂ ಕ್ಷಾಮ ತಲೆದೋರಿದ ಸಂದರ್ಭದಲ್ಲಿ ಸಹಕಾರ ದವಸ ಭಂಡಾರಗಳು ಜನರ ನೆರವಿಗೆ ಬಂದು ಪ್ರತಿಯೊಂದು ಗ್ರಾಮಮಟ್ಟದಲ್ಲಿಯೂ ಸ್ಥಾಪನೆಯಾಯಿತು. ಹಿರಿಯರು ಮುಂದಾಲೋಚನೆಯೊಂದಿಗೆ ಸ್ಥಾಪಿಸಲ್ಪಟ್ಟ ಸಂಘವು ಇಂದು ಹಲವು ವಿಧದ ಸಹಕಾರ ಸಂಘಗಳ ಸ್ಥಾಪನೆ, ಪೈಪೋಟಿಯಿಂದಾಗಿ ಬಹುತೇಕ ಸಹಕಾರ ದವಸ ಭಂಡಾರಗಳು ವಿನಾಶದ ಅಂಚಿನಲ್ಲಿವೆ. ಅಂತಹದರಲ್ಲಿ ಕೊಳಕೇರಿ ವಿವಿಧೊದ್ಧೇಶ ಸಹಕಾರ ದವಸ ಭಂಡಾರದ ಸಾಧನೆ ಗಮನಾರ್ಹವಾಗಿದೆ ಎಂದರು. ತಮ್ಮ ಸ್ವಂತ ಸಂಪನ್ಮೂಲದಿಂದ ಉತ್ತಮ ಕಟ್ಟಡವನ್ನು ಹೊಂದಿ, ಗೊಬ್ಬರ, ಹತ್ಯಾರು ಮತ್ತು ಸದಸ್ಯರಿಗೆ ಸಾಲ ನೀಡುವ ಕಾರ್ಯಚಟುವಟಿಕೆ ನಡೆಸುತ್ತಾ ಮಾದರಿ ಸಂಘವಾಗಿದೆ. ಹಲವು ವಿಧದ ಕುಟುಂಬ ಸಹಕರ ದವಸ ಭಂಡಾರಗಳು ಹಾಗೂ ಹಲವು ದವಸ ಭಂಡಾರಗಳು ಸ್ಥಾಪನೆಯಾಗಿ ಶತದಿನವನ್ನು ಪೂರೈಸಿದೆ ಎಂದು ಮಾಹಿತಿ ನೀಡಿದರು. ಭಾರತ ದೇಶ 2028 ರಲ್ಲಿ ಪ್ರಪಂಚದಲ್ಲಿ 3ನೇ ಬಲಿಷ್ಟ ರಾಷ್ಟ್ರವಾಗಲು ಹಲವಾರು ಕಾರ್ಯಕ್ರಮ ಹಾಕಿಕೊಂಡಿದೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಹಾಕಿಕೊಂಡು 2040 ಕ್ಕೆ 100 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ಗುರಿ ಹೊಂದಿದೆ. ದೇಶದ ಆರ್ಥಿಕತೆ ವೃದ್ಧಿಸಲು ಸಹಕಾರ ಕ್ಷೇತ್ರವು ಸಹ ಒಂದು ಮಾರ್ಗ ಎಂಬುದನ್ನು ಮನಗಂಡು ಕೇಂದ್ರ ಸರ್ಕಾರವು ಸಹಕಾರ ಸಚಿವಾಲಯವನ್ನು ಪ್ರಾರಂಭಿಸಿ ಇಂದಿಗೂ ಸಹ ಅಮಿತ್ ಶಾ ರವರನ್ನು ಕೇಂದ್ರ ಸಹಕಾರ ಮಂತ್ರಿಯನ್ನಾಗಿಸಿ ಉತ್ತಮ ಯೋಜನೆಗಳನ್ನು ಘೋಷಿಸಿದೆ. ಅಮಿತ್ ಶಾ ರವರು ಇಂದಿಗೂ ಕೂಡ ಸ್ಥಳೀಯ ಸಹಕಾರ ಸಂಘದಲ್ಲಿ ಅಧ್ಯಕ್ಷರಾಗಿದ್ದು ಸಹಕಾರ ಕ್ಷೇತ್ರಕ್ಕೆ ವರದಾನವಾಗಿದ್ದು, ಸಹಕಾರ ಸಂಘಗಳು ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸುವಂತೆ ಉತ್ತೇಜಿಸಲು ಹತ್ತು ಅಂಶಗಳ ಯೋಜನೆಗಳನ್ನು, ಡಿಜಿಟಲೀಕರಣಗೊಳಿಸಲು, ಏಕರೂಪದ ಉಪನಿಯಮ ಇತ್ಯಾದಿ ತಾಂತ್ರಿಕತೆಯಲ್ಲಿ ಬಲಪಡಿಸುವ ಯೋಜನೆಗಳ ಕುರಿತು ರೂಪುರೇಷೆಗಳನ್ನು ಸಿದ್ಧಪಡಿಸಿ ಘೋಷಿಸಿರುವುದು ಸಹಕಾರ ಕ್ಷೇತ್ರಕ್ಕೆ ವರದಾನವಾಗಿದ್ದು ಎಲ್ಲರೂ ಬಂಡವಾಳ ಸಂಗ್ರಹಿಸಿ ಯೋಜನೆಗಳನ್ನು ಕಾರ್ಯಗತಗೊಳಿಸಿಕೊಂಡು ಹಿರಿಯರು ಪ್ರಾರಂಭಿಸಿದಂತಹ ಸಂಘವನ್ನು ಬೆಳೆಸಿಕೊಂಡು ಹೋಗಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಳಕೇರಿ ವಿವಿಧೊದ್ಧೇಶ ಸಹಕಾರ ದವಸ ಭಂಡಾರದ ಅಧ್ಯಕ್ಷರಾದ ಶ್ರೀ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿ, ಸಹಕಾರ ಮನೆಯಿಂದ ಆರಂಭವಾಗಿ ಊರಿಗೆ ಬಂದು ನಾಡಿಗೆ ಹರಡಿ ದೇಶವ್ಯಾಪಿಯಾಗಿದೆ. ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಸಹಕಾರ ಕ್ಷೇತ್ರ ಪಾದಾರ್ಪಣೆ ಮಾಡದ ವಲಯವಿಲ್ಲ. ಎಲ್ಲಾ ವಲಯದಲ್ಲೂ ಸಹಕಾರ ಕ್ಷೇತ್ರ ಕಾರ್ಯನಿರ್ವಹಿಸುತ್ತಿದೆ. ಕೊಳಕೇರಿ ಸಹಕಾರ ದವಸ ಭಂಡಾರದಲ್ಲಿ ಸಂಪನ್ಮೂಲ ಕೊರತೆಯಿದ್ದು ಈ ನಿಟ್ಟಿನಲ್ಲಿ ಡಿ.ಸಿ.ಸಿ. ಬ್ಯಾಂಕ್ ಹಾಗೂ ನಾಪೋಕ್ಲು ಪ್ಯಾಕ್ಸ್‍ನ ಸಹಕಾರ ಅಗತ್ಯವೆಂದು ತಿಳಿಸುತ್ತಾ ಕಾರ್ಯಕ್ರಮವನ್ನು ದವಸ ಭಂಡಾರದ ಸಹಯೋಗದೊಂದಿಗೆ ಆಚರಿಸುತ್ತಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು. ಅಂತೆಯೇ ಸರ್ಕಾರಗಳು ಸಹಕಾರ ಸಂಘಗಳನ್ನು ಸ್ವಚಂದವಾಗಿ ಕೆಲಸ ನಿರ್ವಹಿಸಲು ಅನುವು ಮಾಡಿಕೊಡಬೇಕು, ಕಾನೂನು-ಕಾಯ್ದೆಗಳನ್ನು ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಮಾರ್ಪಾಟು ಮಾಡಬೇಕೇ ವಿನಃ ರಾಜಕೀಯ ಮೇಲಾಟಕ್ಕಾಗಿ ಕಾಯ್ದೆ-ಕಾನೂನುಗಳನ್ನು ತಿದ್ದುಪಡಿ ತಂದು ಸಂಘವನ್ನು ಅಧೋಗತಿಗೆ ತಳ್ಳುವ ಕೆಲಸ ಮಾಡಬಾರದೆಂದು ಮನವಿ ಮಾಡಿದರು. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಕೆ.ಎಸ್.ಹರೀಶ್ ಪೂವಯ್ಯ ಮಾತನಾಡಿ, ಹಿರಿಯರು ಕಟ್ಟಿ ಬೆಳೆಸಿದಂತಹ ಸಹಕಾರ ಸಂಘಗಳನ್ನು ನಾವು ಬೆಳೆಸಬೇಕಾಗಿದೆ. ಅದರಲ್ಲೂ ಸಹಕಾರ ದವಸ ಭಂಡಾರಗಳ ಸ್ಥಿತಿ ಹೀನಾಯವಾಗಿದೆ. ವಿವಿಧೊದ್ಧೇಶ ಸಹಕಾರ ಸಂಘವಾಗಿ ಮಾರ್ಪಾಟು ಮಾಡಿದ್ದರೂ ಸಹ ಅವುಗಳ ಪ್ರಗತಿ ಕಡಿಮೆಯಾಗುತ್ತಿದೆ. ವಿವಿಧ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿ, ಬಂಡವಾಳ ಸಂಗ್ರಹಣೆಯಲ್ಲಿ ವಿಫಲತೆಯಿಂದಾಗಿ ಅವುಗಳ ಪ್ರಗತಿ ಕುಂಠಿತವಾಗುತ್ತಿದೆ. ಈ ದಿಸೆಯಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ಹಲವು ರೀತಿಯ ಸಹಾಯವನ್ನು ಒದಗಿಸಲಾಗುತ್ತಿದ್ದು ಅವುಗಳ ಸದುಪಯೋಗವಾಗಬೇಕೆಂದು ಸಲಹೆ ನೀಡಿದರು. ಕೊಡಗು ಸಹಕಾರ ರತ್ನ’ ಪ್ರಶಸ್ತಿ ಪುರಸ್ಕøತರು ಹಾಗೂ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಬಿ.ಎ.ರಮೇಶ್ ಚಂಗಪ್ಪ ಮಾತನಾಡಿ, ಕೊಳಕೇರಿ ಸಹಕಾರ ದವಸ ಭಂಡಾರವು ಇನ್ನೂ ಹಿಂದೆ ಸ್ಥಾಪನೆಯಾಗಿದು,್ದ ದಾಖಲಾತಿಗಳ ಕೊರತೆಯಿಂದಾಗಿ ಸಂಘದ ಸ್ಥಾಪನೆ ಕುರಿತು ಗೊಂದಲ ಉಂಟಾಗಿದೆ. ಇಂತಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘವನ್ನು ಬೆಳೆಸಬೇಕಾಗಿದೆ. ಈ ದಿಸೆಯಲ್ಲಿ ಕೊಳಕೇರಿ ಸಹಕಾರ ದವಸ ಭಂಡಾರವನ್ನು ಶ್ಲಾಘಿಸಬೇಕಾಗಿದೆ. ಅದು ಜಿಲ್ಲೆಯಲ್ಲಿಯೇ ಉತ್ತಮ ಸಂಘವಾಗಿ ಬೆಳೆಯುತ್ತಿದೆ. ಹಾಗೂ ಸಾಲ ನೀಡುವಿಕೆ, ಗೊಬ್ಬರ ವ್ಯಾಪಾರ ನಡೆಸುತ್ತಾ ಅಲ್ಪಮಟ್ಟದಲ್ಲಿ ಲಾಭಗಳಿಸುತ್ತಾ ಮುಂದುವರೆಯುತ್ತಿರುವುದು ಶ್ಲಾಘನೀಯ ಎಂದು ಅಭಿನಂದನೆಗಳನ್ನು ತಿಳಿಸಿದರು. ಸಹಕಾರ ಸಪ್ತಾಹದಲ್ಲಿ ‘ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವ’ ವಿಷಯದ ಕುರಿತು ಕೆ.ಐ.ಸಿ.ಎಂ.ನ ನಿವೃತ್ತ ಪ್ರಾಂಶುಪಾಲರಾದ ಎಂ.ಎಂ.ಶ್ಯಾಮಲಾ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಪ್ರೇಮ ಸೋಮಯ್ಯ, ಕೆ.ಎಂ.ತಮ್ಮಯ್ಯ, ಕೊಳಕೇರಿ ಸಹಕಾರ ದವಸ ಭಂಡಾರದ ಉಪಾಧ್ಯಕ್ಷ ಕೆ.ಸಿ.ಪೂವಯ್ಯ ಹಾಗೂ ನಿರ್ದೇಶಕರುಗಳು ಯೂನಿಯನ್ ವ್ಯವಸ್ಥಾಪಕಿ ಆರ್. ಮಂಜುಳ, ಸಿಬ್ಬಂದಿಗಳಾದ ಬಿ.ಸಿ. ಅರುಣ್ ಕುಮಾರ್, ಕೆ.ಎಸ್. ಸುರೇಶ್ ಹಾಜರಿದ್ದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕೊಳಕೇರಿ ವಿವಿಧೊದ್ಧೇಶ ಸಹಕಾರ ದವಸ ಭಂಡಾರದ ಕಾರ್ಯದರ್ಶಿ ಪೊನ್ನಣ್ಣ ಸ್ವಾಗತಿಸಿದರು. ರೇಖ ಪೊನ್ನಣ್ಣ ಪ್ರಾರ್ಥಿಸಿದರು.