ನಾಪೋಕ್ಲು ನ.19 NEWS DESK : ಬಲ್ಲಮಾವಟಿಯ ಭಜರಂಗಿ ಯೂಥ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಮೂರನೇ ವರ್ಷದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿಯನ್ನು ಕಟ್ಟೆಮಾಡುವಿನ ಬ್ಯಾಕ್ ಈಗಲ್ಸ್ ತಂಡ ಮುಡಿಗೇರಿಸಿಕೊಂಡಿತು. ಮೂರ್ನಾಡಿನ ಎನ್.ಸಿ.ಡಿ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಅಂತಿಮ ಪಂದ್ಯದಲ್ಲಿ ಎಂ.ಎಸ್.ಡಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ ಎಂಟು ಓವರ್ ಗಳಲ್ಲಿ 42 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಬ್ಲ್ಯಾಕ್ ಈಗಲ್ಸ್ ತಂಡ 6.5 ನಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಈ ತಂಡಕ್ಕೆ ರಾಟೆ ದೇವಸ್ಥಾನದ ಅಪ್ಪಣ್ಣ ಪ್ರಾಯೋಜಿಸಿದ ಟ್ರೋಫಿ ಹಾಗೂ 33,333 ನಗದು ಬಹುಮಾನಗಳನ್ನು ವಿತರಿಸಲಾಯಿತು. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಎಡಿಕೇರಿ ಜಗನ್ನಾಥ್ ಪ್ರಾಯೋಜಿಸಿದ ಟ್ರೋಫಿ ಹಾಗೂ 22,222 ರೂ.ನಗದು ನೀಡಿ ಪುರಸ್ಕರಿಸಲಾಯಿತು. ಭಜರಂಗಿ ಯೂತ್ ಕ್ಲಬ್ ಅಧ್ಯಕ್ಷ ಎಡಿಕೇರಿ ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನೇತಾಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ದೇಶದಲ್ಲಿ ಕ್ರಿಕೆಟ್ ಶಿಸ್ತಿನ ಆಟವಾಗಿದೆ. ಭಜರಂಗಿ ಯುವಕ ಸಂಘದ ಪದಾಧಿಕಾರಿಗಳು ಕ್ರೀಡಾಕೂಟವನ್ನು ಆಯೋಜಿಸಿರುವುದು ಗ್ರಾಮೀಣ ಕ್ರೀಡಾಪಟುಗಳಿಗೆ ಸಹಕಾರಿಯಾಗಲಿದೆ ಎಂದರು. ನಾಪೋಕ್ಲು ಕೊಡವ ಸಮಾಜದ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ,ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ ಮಾತನಾಡಿ, ಬಲ್ಲಮಾವಟಿ ಗ್ರಾ.ಪಂ ಉಪಾಧ್ಯಕ್ಷ ಬಾಬಿ ಭೀಮಯ್ಯ, ಸಮಾಜ ಸೇವಕ ಚೀಯಂಡಿರ ದಿನೇಶ್, ಮುಖ್ಯ ಶಿಕ್ಷಕ ಸಿ.ಎಸ್.ಸುರೇಶ್, ಭಜರಂಗಿ ಯೂಥ್ ಕ್ಲಬ್ ಉಪಾಧ್ಯಕ್ಷ ಚಂದ್ರಕಾಂತ ವಿನು, ಕಾರ್ಯದರ್ಶಿ ರಾಜೇಶ್, ಖಜಾಂಚಿ ಕೋಟೇರ ನೂತನ್, ಸಹಕಾರ್ಯದರ್ಶಿ ಮನೋಜ್ ಇತರ ಪದಾಧಿಕಾರಿಗಳು ಇದ್ದರು. ಮೂರು ದಿನ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಭಾಗವಹಿಸಿದ ಕ್ರೀಡಾ ಪ್ರೇಮಿಗಳಿಗೆ ಭಜರಂಗಿ ಯೂಥ್ ಕ್ಲಬ್ ವತಿಯಿಂದ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಪ್ರತ್ಯೇಕ ಬಹುಮಾನ :: ಮ್ಯಾನ್ ಆಫ್ ದಿ ಮ್ಯಾಚ್ ಹಾಗೂ ಉತ್ತಮ ಬೌಲರ್ ಬ್ಲಾಕ್ ಈಗಲ್ ತಂಡದ ಇಚ್ಚು, ಮ್ಯಾನ್ ಆಫ್ ದಿ ಸೀರೀಸ್ ಎಂ.ಎಸ್.ಡಿ ಮೂರ್ನಾಡು ತಂಡದ ಶಿವು, ಉತ್ತಮ ಬ್ಯಾಟ್ಸ್ ಮನ್ ಬ್ಲಾಕ್ ಈಗಲ್ ತಂಡದ ರಜಾಕ್ ಪಡೆದುಕೊಂಡರು.
ವರದಿ : ದುಗ್ಗಳ ಸದಾನಂದ.