ಮಡಿಕೇರಿ NEWS DESK ನ.18 : 1965ರ ಇಂಡೋ-ಪಾಕಿಸ್ತಾನ ಯುದ್ದದಲ್ಲಿ ವೀರಮರಣನಪ್ಪಿದ ನಾಯಕ್ ಕೂಕಂಡ ಎನ್. ಪೊನ್ನಪ್ಪ ಅವರ ಹೆಸರನ್ನು ಸ್ಮರಣೆಗಾಗಿ ಪೊನ್ನಂಪೇಟೆಯ ಜೋಡುಬೀಟಿ- ಕುಂದ ಸಂಪರ್ಕ ರಸ್ತೆಗೆ ಇಡಲಾಗಿದೆ. ನೂತನ ನಾಮಕರಣದ ರಸ್ತೆ ಉದ್ಘಾಟನೆ ಮಾಡಿ ಮಾತನಾಡಿದ ಅಖಿಲ ಕರ್ನಾಟಕ ಮಾಜಿ ಯೋಧರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ಅದೆಷ್ಟೋ ವೀರಯೋಧರು ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಹುತಾತ್ಮರಾಗಿದ್ದಾರೆ. ಎಲ್ಲೆಡೆ ವೀರಯೋಧರಿಗೆ ಗೌರವ ಸಲ್ಲಿಸುವ ಕಾರ್ಯವಾಗಬೇಕೆಂದರು. ಕೂಕಂಡ ಪೊನ್ನಪ್ಪ ಅವರು ಯುದ್ದದಲ್ಲಿ ಶತ್ರುಪಡೆಯೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದರು. ಅವರ ದೇಶಪ್ರೇಮ ಶ್ಲಾಘನೀಯವೆಂದರು. ಮಾಜಿ ಸೈನಿಕರ ಸಂಘದ ಪೊನ್ನಂಪೇಟೆ ಅಧ್ಯಕ್ಷ ಐನಂಡ ಸುಬ್ರಮಣಿ ಮಂದಣ್ಣ ಮಾತನಾಡಿ ವೀರಯೋಧ ಕೂಕಂಡ ಪೊನ್ನಪ್ಪ ಸ್ಮಾರಕ ಭವನ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದರು. ಊರಿನ ಹಿರಿಯರು, ಸಮಾಜ ಸೇವಕರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮೂಕಳೆರ ಕುಶಾಲಪ್ಪ ಮಾತನಾಡಿ ಕೂಕಂಡ ಪೊನ್ನಪ್ಪ ಅವರ ಸಾಹಸ ಹಾಗೂ ಸೇನಾ ಸೇವೆಯ ಬಗ್ಗೆ ವಿವರಿಸಿದರು. ಹಳ್ಳಿಗಟ್ಟು ದೇವಾಲಯ ಸಮಿತಿ ಅಧ್ಯಕ್ಷ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಮಾತನಾಡಿ ಕೂಕಂಡ ಪೊನ್ನಪ್ಪ ಅವರ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸುವಂತ್ತಾಗಬೇಕು ಎಂದರು. ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ, ಪೊನ್ನಪ್ಪ ಅವರ ಸಹೋದರ ಹಾಗೂ ಮಾಜಿ ಯೋಧ ಕೂಕಂಡ ಕಾಶಿ ಕಾಶಿಯಪ್ಪ, ಬಿದ್ದಂಡ ಗೌರಮ್ಮ ಮಾತನಾಡಿದರು. ನೆರೆದಿದ್ದವರು ಕೂಕಂಡ ಪೊನ್ನಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಪೊರೆರ ಕುಶಿ ಅಕ್ಕಮ್ಮ ಪ್ರಾರ್ಥಿಸಿ, ಕೂಕಂಡ ಪಟ್ಟೆದಾರ ಕೂಕಂಡ ರಾಜಕಾವೇರಿಯಪ್ಪ ಸ್ವಾಗತಿಸಿ, ಕೂಕಂಡ ಪ್ರಥ್ವಿ ಅಯ್ಯಪ್ಪ ವಂದಿಸಿ, ಕೂಕಂಡ ಪ್ರದೀಪ್ ಪೂವಯ್ಯ ನಿರೂಪಿಸಿದರು. ಮಾಜಿ ಯೋಧರ ಸಂಘದ ಪದಾಧಿಕಾರಿಗಳು, ಯೋಧರು, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಪ್ರತಿನಿಧಿಗಳು, ಗ್ರಾಮಸ್ಥರು, ಕೂಕಂಡ ಕುಟುಂಬಸ್ಥರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. (ವರದಿ : ಪುತ್ತರಿರ ಕರುಣ್ ಕಾಳಯ್ಯ)












