ಮಡಿಕೇರಿ ನ.23 NEWS DESK : ರಾಷ್ಟ್ರದಲ್ಲಿ ಶುದ್ಧ ಗಾಳಿ ಮತ್ತು ಪರಿಸರ ಹೊಂದಿರುವ ಪ್ರಮುಖ ನಗರ/ ಪಟ್ಟಣಗಳಲ್ಲಿ ಒಂದಾದ ಮಡಿಕೇರಿಯ ಶುಚಿತ್ವಕ್ಕೆ ಪೌರಕಾರ್ಮಿಕರ ಶ್ರಮ ಹೆಚ್ಚಿನದ್ದಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಶ್ಲಾಘಿಸಿದ್ದಾರೆ. ನಗರಸಭೆ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಾರ್ವಜನಿಕ ಜೀವನದಲ್ಲಿ ಪೌರಕಾರ್ಮಿಕರನ್ನು ಗೌರವಿಸಬೇಕು. ಪೌರಕಾರ್ಮಿಕರು ಇತರರಂತೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಡಾ.ಮಂತರ್ ಗೌಡ ತಿಳಿಸಿದರು. ಪೌರಕಾರ್ಮಿಕರು ಪಟ್ಟಣ, ನಗರ, ಮಹಾನಗರ ಪಾಲಿಕೆಗಳ ಬೆನ್ನುಲುಬು ಎಂದರೆ ತಪ್ಪಾಗಲಾರದು. ರಜೆ ಅವಧಿಯಲ್ಲಿ ರಜೆ ಪಡೆಯದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ನಗರ, ಪಟ್ಟಣ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದು ಡಾ,ಮಂತರ್ ಗೌಡ ಅವರು ನುಡಿದರು. ಪೌರಕಾರ್ಮಿಕರು ವೃತ್ತಿಯ ಜೊತೆಗೆ ಆರೋಗ್ಯ ಹಾಗೂ ಮಕ್ಕಳ ಶಿಕ್ಷಣ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕರು ಸಲಹೆ ನೀಡಿದರು. ಪೌರಕಾರ್ಮಿಕರ ಒತ್ತಡ ಕಡಿಮೆ ಮಾಡುವಲ್ಲಿ ಮುಂದಿನ ನಗರಸಭೆ ಸಾಮಾನ್ಯ ಸಭೆಯಲ್ಲಿ ಸ್ವಚ್ಛತಾ ಯಂತ್ರಗಳನ್ನು ಖರೀದಿಸುವಂತಾಗಲು ಅನುಮತಿ ಪಡೆದು ಯಂತ್ರಗಳನ್ನು ಖರೀದಿಸುವಂತಾಗಬೇಕು ಎಂದು ಇದೇ ಸಂದರ್ಭದಲ್ಲಿ ಶಾಸಕರು ಸಲಹೆ ನೀಡಿದರು. ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಆ ನಿಟ್ಟಿನಲ್ಲಿ ಶೀಘ್ರ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಪೌರಕಾರ್ಮಿಕರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ವೆಂಕಟ್ ರಾಜಾ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಶಾಸಕರಾದ ಡಾ.ಮಂತರ್ ಗೌಡ ಅವರು ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಿಸಿದರು. ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ನಗರಸಭೆ ಸದಸ್ಯರಾದ ಮನ್ಸೂರ್, ನಾಮನಿರ್ದೇಶಿತ ಸದಸ್ಯರಾದ ಮುದ್ದುರಾಜ್, ಜಗದೀಶ್, ಸದಾಮುದ್ದಪ್ಪ, ನಗರಸಭೆ ಮಾಜಿ ಅಧ್ಯಕ್ಷರಾದ ಎಚ್.ಎಂ.ನಂದಕುಮಾರ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಚಂದ್ರಶೇಖರ್, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರಾದ ಸತೀಶ್, ಪೌರಾಯುಕ್ತರಾದ ಎಚ್.ಎಂ.ರಮೇಶ್, ಸ್ವಚ್ಚತಾ ಸೇನಾನಿಗಳಾದ ರಾಮು, ಲಕ್ಷ್ಮಿ, ಮೀನಾಕ್ಷಿ, ನಗರಸಭೆ ಎಂಜಿನಿಯರ್ ಸತೀಶ್, ಹೇಮಂತ್ ಕುಮಾರ್, ತಾಹಿರ್ ಇತರರು ಇದ್ದರು. ಸ್ವಾತಿಮುತ್ತು, ರೇಷ್ಮ ತಂಡದವರು ಪ್ರಾರ್ಥಿಸಿದರು. ನಗರಸಭೆ ಕಂದಾಯಾಧಿಕಾರಿ ತಾಹೀರ್ ಪ್ರಾರ್ಥಿಸಿದರು, ಹೇಮಂತ್ ನಿರೂಪಿಸಿದರು.