ಮಡಿಕೇರಿ ನ.23 NEWS DESK : ಜಿಲ್ಲೆಯ ಪ್ರಾಥಮಿಕ ಸಹಕಾರ ಸಂಘಗಳ ಸುಸ್ಥಿರತೆಗೆ ಎಲ್ಲರೂ ಶ್ರಮಿಸುವಂತೆ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸಹಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಹಕಾರ ಸಂಘಗಳು ಕೃಷಿಕರ ಬೆನ್ನುಲುಬಾಗಿದ್ದು, ಸಹಕಾರ ಸಂಘಗಳನ್ನು ಪ್ರತಿಯೊಬ್ಬರೂ ಬಲಪಡಿಸಲು ಮುಂದಾಗಬೇಕು. ಸಹಕಾರ ಸಂಘಗಳು ಉಳಿದಲ್ಲಿ ಕೃಷಿಕರಿಗೆ ಸಹಕಾರಿಯಾಗಲಿದೆ ಎಂದು ಕೆ.ಎನ್.ರಾಜಣ್ಣ ಹೇಳಿದರು. ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಲು ಅವಕಾಶವಿದ್ದು, ಅಗತ್ಯ ಇದ್ದಲ್ಲಿ ಈ ಸಂಬಂಧ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಾಪಿಸಲು ಸೂಕ್ತ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಬಹುದಾಗಿದೆ ಎಂದು ಸಹಕಾರ ಸಚಿವರಾದ ಅವರು ತಿಳಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ 74 ಸೇವಾ ಸಹಕಾರ ಸಂಘಗಳಿದ್ದು, ಅದರಲ್ಲಿ 4 ಪ್ರಾಥಮಿಕ ಸೇವಾ ಸಹಕಾರ ಸಂಘಗಳು ನಷ್ಟದಲ್ಲಿರುವ ಬಗ್ಗೆ ಮಾಹಿತಿ ಇದೆ. ಆದ್ದರಿಂದ ಅಂತಹ ಪ್ರಾಥಮಿಕ ಸೇವಾ ಸಹಕಾರ ಸಂಘಗಳನ್ನು ಲಾಭದಲ್ಲಿ ನಡೆಸುವಂತಾಗಲು ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದು ಕೆ.ಎನ್.ರಾಜಣ್ಣ ಸಲಹೆ ನೀಡಿದರು. ಕೊಡಗಿನಂತಹ ಜಿಲ್ಲೆಯಲ್ಲಿ ಕೆಲವೊಂದು ಸಹಕಾರ ಸಂಘಗಳು ನಷ್ಟದಲ್ಲಿ ಇರುವುದು ಬೇಸರದ ಸಂಗತಿ. ಆದ್ದರಿಂದ ನಷ್ಟದಲ್ಲಿರುವ ಸಹಕಾರ ಸಂಘಗಳನ್ನು ಬಲಪಡಿಸಲು ಮುಂದಾಗಬೇಕಿದೆ ಎಂದು ಸಹಕಾರ ಸಚಿವರು ನಿರ್ದೇಶನ ನೀಡಿದರು. ನಷ್ಟದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿನ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ಲಾಭಕ್ಕೆ ತರುವ ನಿಟ್ಟಿನಲ್ಲಿ ಕ್ರಮವಿಹಿಸುವಂತೆ ಸಹಕಾರ ಸಚಿವರು ಸಲಹೆ ಮಾಡಿದರು. ಸಹಕಾರ ಸಂಘಗಳ ಉಪನಿಬಂಧಕರು ಮತ್ತು ಸಹಕಾರ ಸಂಘಗಳ ಸಹಾಯಕ ನಿಬಂಧಕರುಗಳು ನ್ಯಾಯಾಲಯದಲ್ಲಿರುವ ಧಾವೆ ಹಾಗೂ ಹಣ ದುರುಪಯೋಗ ಪ್ರಕರಣಗಳನ್ನು ಶೀಘ್ರವಾಗಿ ನಿಯಮಾನುಸಾರ ಇತ್ಯರ್ಥ ಪಡಿಸಬೇಕು. ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಹಾಗೂ ಸಮಾಪನಾ ಸಹಕಾರ ಸಂಘಗಳ ಪುನಃಶ್ಚೇತನಕ್ಕೆ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು. ಸಹಕಾರ ಸಂಘಗಳು ಕ್ಷೇಮನಿದಿ ಸೇರಿದಂತೆ ಇತರೆ ಬ್ಯಾಂಕುಗಳಲ್ಲಿ ಠೇವಣಿ ಮಾಡದೆ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಇದರಲ್ಲಿ ಹೂಡಿಕೆ ಮಾಡಬೇಕು ಎಂದು ನಿರ್ದೇಶನ ನೀಡಿದರು. ಬ್ಯಾಂಕುಗಳು ಇಂದಿನ ಕಾಲದಲ್ಲಿ ಶೇ.50 ರಷ್ಟು ಕೃಷಿಯೇತರ ಸಾಲ ನೀಡಿ ಲಾಭ ಗಳಿಸುವತ್ತ ಗಮನಹರಿಸಿ ತಮ್ಮ ದೃಢತೆಯನ್ನು ಕಾಯ್ದುಕೊಳ್ಳಲು ಸೂಚಿಸಿದರು. ನಬಾರ್ಡ್ ನಿಂದ ರಿಯಾಯಿತಿ ಬಡ್ಡಿದರದಲ್ಲಿ ನೀಡಲ್ಪಡುತ್ತಿದ್ದ ಅಲ್ಪಾವಧಿ ಕೃಷಿ ಸಾಲದ ಪ್ರಮಾಣವನ್ನು ಕಡಿತಗೊಳಿಸಿರುವ ಬಗ್ಗೆ ಮನವರಿಕೆ ಮಾಡಿದರು. ಸಹಕಾರ ಸಂಘಗಳ ಲೆಕ್ಕಪರಿಶೋಧನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರಿಗೆ ಸೂಚಿಸಿದರು. ಜಿಲ್ಲೆಯ ಮೂರು ಪಿಕಾರ್ಡ್ ಬ್ಯಾಂಕುಗಳಲ್ಲಿನ ಸಾಲ ವಿತರಣೆ ಹಾಗೂ ಇತರೆ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲಿಸಿದರು. ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರಿಗೆ ನಿಗದಿತ ದರವನ್ನು ಕಾಲಮಿತಿಯಲ್ಲಿ ಪಾವತಿಸಲು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗದೆ ಇರುವ ಹಾಲು ಉತ್ಪಾದಕರನ್ನು ಸಂಬಂಧಿಸಿದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರನ್ನಾಗಿ ನೊಂದಾಯಿಸಲು ಕ್ರಮವಹಿಸುವಂತೆ ಸಹಕಾರ ಸಚಿವರು ಸೂಚಿಸಿದರು. ರಾಜ್ಯ ಸರ್ಕಾರದ ಸದಸ್ಯತ್ವ ನೋಂದಣಿ ಯೋಜನೆಯ ಮುಖಾಂತರ ಅರ್ಹ ಹಾಲು ಉತ್ಪಾದಕರನ್ನು ಸಂಬಂಧಿಸಿದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರನ್ನಾಗಿ ನೋಂದಾಯಿಸಲು ಕ್ರಮವಿಹಿಸುವಂತೆ ಹಾಲು ಒಕ್ಕೂಟದ ಅಧಿಕಾರಿಗಳಿಗೆ ಸೂಚಿಸಿದರು. ಸಹಕಾರ ಇಲಾಖೆಯೊಂದಿಗೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಸಿಇಒ ಅವರು ಸಮನ್ವಯ ಸಾಧಿಸಿ ಸಹಕಾರ ಇಲಾಖೆಯ ಕಾರ್ಯಕ್ರಮಗಳು, ತರಬೇತಿ ಕಾರ್ಯಕ್ರಮಗಳನ್ನು ನಡೆಸಿಕೊಡುವಂತೆ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಿಬ್ಬಂಧಿಗಳಿಗೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಇತರೆ ಸಹಕಾರ ಸಂಘಗಳ ಸಿಬ್ಬಂಧಿಗಳಿಗೆ ಅಗತ್ಯ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಕೆ.ಎನ್.ರಾಜಣ್ಣ ಅವರು ಸೂಚಿಸಿದರು. ಜಿಲ್ಲೆಯಲ್ಲಿ ಸಹಕಾರ ಇಲಾಖೆ ಮತ್ತು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಮನ್ವಯದಿಂದ ಜಂಟಿಯಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ಎಲ್ಲಾ ಕೇಂದ್ರ ಸಹಕಾರ ಸಂಘಗಳ ಪರಿವೀಕ್ಷಣೆಯನ್ನು ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಿಯಾಯೋಜನೆ ಸಿದ್ದಪಡಿಸಿ ಸಹಕಾರ ಕ್ಷೇತ್ರದ ಅಭಿವೃದ್ದಿಗೆ ಪೂರಕ ಕಾರ್ಯಕ್ರಮ ರೂಪಿಸುವಂತೆ ಸೂಚಿಸಿದರು. ಕೊಡಗು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮುಂಡಂಡ ಸಿ. ನಾಣಯ್ಯ, ಸಹಕಾರ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಿ.ಎಸ್.ರಮಣರೆಡ್ಡಿ, ಬೆಂಗಳೂರು ಅಪೆಕ್ಸ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವರಾಜು.ಸಿ.ಎನ್., ಸಹಕಾರ ಸಂಘಗಳ ಅಪರ ನಿಬಂಧಕರಾದ(ಪತ್ರು) ಬಾಲಶೇಖರ್ ಎಚ್., ಕೊಡಗು ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ನಾಯಕ್, ಸಹಕಾರ ಸಂಘಗಳ ಉಪ ನಿಬಂಧಕರಾದ ವಿಜಯಕುಮಾರ್.ಜಿ.ಆರ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರಾದ ಹೇಮಾವತಿ, ಸಹಕಾರ ಸಂಘಗಳ ಉಪ ವಿಭಾಗದ ಸಹಾಯಕ ನಿಬಂಧಕರಾದ ಶೈಲಜಾ, ಸಹಕಾರ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಆರ್.ಎಸ್.ರೇಣುಕಾ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಿಇಒ ಯೋಗೇಂದ್ರ ನಾಯಕ್, ಡಿಸಿಸಿ ಬ್ಯಾಂಕಿನ ಮಹಾಪ್ರಬಂಧಕಾದ ಭೋಜಮ್ಮ, ಕೊಡಗು ಕಾಸ್ಕಾರ್ಡ್ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕರು, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕರು ಇತರರು ಇದ್ದರು.