ಮಡಿಕೇರಿ ನ.23 NEWS DESK : ವಿರಾಜಪೇಟೆ ಕಾವೇರಿ ಕಾಲೇಜು ಹಾಗೂ ಇನ್ಟೊಪೀಸ್ ಡ್ಯಾನ್ಸ್ ಕ್ರಿವ್ ಸಂಸ್ಥೆಯ ಜಂಟಿ ಸಹಯೋಗದಲ್ಲಿ ನ.29 ರಂದು ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲರವ ಎಂಬ ಜಿಲ್ಲಾಮಟ್ಟದ ವಿವಿಧ ಜಾನಪದ ಸ್ಪರ್ಧೆ ನಡೆಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್.ಸಲ್ದಾನ ತಿಳಿಸಿದರು. ಕಾಲೇಜಿನ ಕೌಸ್ತುಬ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಲೇಜಿನ ಆವರಣದಲ್ಲಿ ಸಾಂಸ್ಕೃತಿಕ ಕಲರವ ನಡೆಯಲಿದ್ದು, ಆಧುನಿಕ ಮಾಧ್ಯಮದಿಂದ ಮಕ್ಕಳ ಗಮನ ಭಾರತೀಯ ಹಾಗೂ ಸ್ಥಳೀಯ ಸಂಸ್ಕೃತಿಯಿಂದ ದೂರವಾಗುತ್ತಾ ಪಾಶ್ಚಿಮಾತ್ಯದ ಕಡೆಗೆ ಸಾಗುತ್ತಿದೆ. ಈ ಸಮಾಜದಲ್ಲಿ ನಮ್ಮ ಮೂಲ ಸಂಸ್ಕೃತಿ ನೀಡುವ ಮೌಲ್ಯವು ದಿನೇ ದಿನೇ ಕ್ಷೀಣಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟವಾದ ಗುರಿ ಹಾಗೂ ಗುರಿ ತಲುಪಲು ಬೇಕಾದ ಪ್ರಯತ್ನ ಕಾಣುತ್ತಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ನಿರಾಸಕ್ತಿ ಹೆಚ್ಚುತ್ತಾ ಹೋಗುತ್ತಿದೆ . ಆದ್ದರಿಂದ ಮಕ್ಕಳಲ್ಲಿ ಮೂಲ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಹಾಗೂ ನಮ್ಮ ಜಾನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಲರವ ಎಂಬ ಜಾನಪದ ಸ್ಪರ್ಧೆಯನ್ನು ಆಯೋಜಿಸುತ್ತಿದ್ದೇವೆ ಎಂದರು. ಕಾವೇರಿ ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕರಾದ ಅಕ್ಷಿತಾ ನಾಯ್ಕ್ ಮಾತನಾಡಿ, ಕಾವೇರಿ ಕಾಲೇಜು ಕಳೆದ 25 ವರ್ಷಗಳಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೊಡಗಿನ ಕಲಾವಿದರಿಗೆ ಸದಾ ವೇದಿಕೆಯನ್ನು ಒದಗಿಸುತ್ತಾ ಬಂದಿದೆ. ಆ ನಿಟ್ಟಿನಲ್ಲಿ ಈ ವರ್ಷವೂ ಜಾನಪದ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಲರವ ಎಂಬ ವಿವಿಧ ಜಾನಪದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ನ.29ರಂದು 16 ರಿಂದ 19 ವರ್ಷದ ಎಲ್ಲಾ ಪ್ರತಿಭಾವಂತರಿಗೂ ಭಾಗವಹಿಸಲು ಅವಕಾಶವಿದೆ. ಜಾನಪದ ನೃತ್ಯ , ಜಾನಪದ ಗೀತೆ ಸಮೂಹ ಗಾಯನ ಮತ್ತು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಫ್ಯಾಷನ್ ಶೋ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ .ನಮ್ಮ ಜಾನಪದ ಸಂಸ್ಕೃತಿಯನ್ನು ಜನಪದ ಸಂಸ್ಕೃತಿಯ ಮೌಲ್ಯವನ್ನು ಎತ್ತಿ ಹಿಡಿಯುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದ್ದು ಪ್ರತಿಸ್ಪರ್ಧೆಗೆ ಭಾಗವಹಿಸಲು 100 ರೂಪಾಯಿ ನೋಂದಣಿ ಶುಲ್ಕವಿದ್ದು ಪ್ರತಿ ತಂಡದಲ್ಲಿ ಆರರಿಂದ 6 ರಿಂದ 8 ಸದಸ್ಯರಿಗೆ ಅವಕಾಶವಿದ್ದು ಪ್ರತಿಸ್ಪರ್ಧೆಗೂ 5 ನಿಮಿಷ ಗರಿಷ್ಠ ಕಾಲಾವಧಿಯನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ .8762346086 ಅಕ್ಷಿತಾ, 8951262724 ವಿಷ್ಣು ಇವರನ್ನು ಸಂಪರ್ಕಿಸಬಹುದಾಗಿದ್ದು. ನವಂಬರ್ 25 ನೋಂದಣಿಗೆ ಕೊನೆಯ ದಿನವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ವೀಣಾ, ಐ.ಕ್ಯೂ.ಎ. ಸಿ ಸಂಯೋಜಕ ಪ್ರಿಯಾ, ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿ ಸಂಚಾಲಕ ನಾಗರಾಜು ಇದ್ದರು.