

ಮಡಿಕೇರಿ ನ.23 NEWS DESK : ಸಂಸ್ಕಾರವಂತ ಸಮಾಜ ನಿರ್ಮಾಣದ ರೂವಾರಿಗಳು ಅಂಗನವಾಡಿ ತಾಯಂದಿರು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ದ ತೆನ್ನಿರ ಮೈನಾ ಶ್ಲಾಘಿಸಿದ್ದಾರೆ. ಬೋಯಿಕೆರಿ ಅಂಗನವಾಡಿಯಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಬೋಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರು ತಾವು ಪಡೆಯುವ ಗೌರವಧನಕ್ಕೆ ಮೀರಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಿರುವವರು,ಇವರಿಂದ ಮಕ್ಕಳು ಸಂಸ್ಕಾರ ಮತ್ತು ಶಿಸ್ತನ್ನು ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳುತ್ತಿದ್ದಾರೆ. ಇಂತಹ ಕಾರ್ಯಕರ್ತೆಯರ ಬೀಳ್ಕೊಡುಗೆ ಸಮಾರಂಭಕ್ಕೆ ಪಾಲ್ಗೊಂಡು ಭೂಮಿ ತೂಕದ ವ್ಯಕ್ತಿತ್ವದ ತಾಯಿಯಂದಿರನ್ನು ಸನ್ಮಾನಿಸಿದ್ದು ತುಂಬಾ ಸಂತೋಷವನ್ನು ಉಂಟು ಮಾಡಿದ್ದು ಇದೊಂದು ಅವಿಸ್ಮರಣೀಯ ಕ್ಷಣ ಎಂದು ತಿಳಿಸಿದರು. ಸರ್ಕಾರದ ಎಲ್ಲಾ ಯೋಜನೆಗಳನ್ನು ಮಹಿಳೆಯರಿಗೆ ಮಕ್ಕಳಿಗೆ ಗ್ರಾಮಸ್ಥರಿಗೆ ತಲುಪಿಸುವಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸಮಾಜದ ಪರವಾಗಿ ಧನ್ಯವಾದಗಳು ಅರ್ಪಿಸಿದರು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, 30 ರಿಂದ 32 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ಸರ್ಕಾರದಿಂದ ದೊರೆಯುವ ಸೌಲಭ್ಯದೊಂದಿಗೆ ಅತಿ ಹೆಚ್ಚು ಸಮುದಾಯದವರ ಸಹಕಾರ ಪಡೆದು ಅಂಗನವಾಡಿ ಕೇಂದ್ರವನ್ನು ಉತ್ತಮ ಮಟ್ಟದಲ್ಲಿ ನಡೆಸಿದ್ದು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಎಲ್ಲ ರೀತಿಯ ಸೌಲಭ್ಯಗಳು ದೊರಕುವಲ್ಲಿ ಬಹಳಷ್ಟು ಶ್ರಮವಹಿಸಿದ್ದಕ್ಕಾಗಿ ಇಲಾಖೆ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮದ ಉತ್ತಮ ಆಯೋಜನೆಗಾಗಿ ಅಂಗನವಾಡಿ ಕಾರ್ಯಕರ್ತೆಯರಾದ ಸಕೀನಾ, ಸಫಿಯಾರವರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘಟನೆಯ ಅಧ್ಯಕ್ಷರಾದ ಧರಣಿಯವರು ಪಾಲ್ಗೊಂಡಿದ್ದರು. ಮಕ್ಕಳಿಂದ ಛದ್ಮವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ನೆಚ್ಚಿನ ಸ್ನೇಹಿತೆಯರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಬಹುಮಾನ ಮತ್ತು ಸಿಹಿ ವಿತರಿಸಲಾಯಿತು. ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಯೂನಿ ಲರ್ನ್ ಕರ್ನಾಟಕ ತರಬೇತಿ ನೀಡಲಾಯಿತು.
ಸನ್ಮಾನ :: ಮಕ್ಕಂದೂರು ಅಂಗನವಾಡಿಯಲ್ಲಿ 30 ವರ್ಷ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಪ್ರೇಮಾವತಿ, ಬೋಯಿಕೇರಿ ಅಂಗನವಾಡಿಯಲ್ಲಿ 32 ವರ್ಷ ವೆ ಸಲ್ಲಿಸಿದ ಲೀಲಾವತಿ ಅವರನ್ನು ಚೇರಂಬಾಣೆ ವೃತ್ತದ 28 ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಸೇರಿ ಸನ್ಮಾನಿಸಿ, ಗೌರವ ಉಡುಗೊರೆ ನೀಡಿ ಬೀಳ್ಕೊಟ್ಟರು.
ಶಾಸಕರಿಗೆ ಮನವಿ :: ಇದೇ ಸಂಧರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು, ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಅಂಗನವಾಡಿ ಶಿಕ್ಷಕಿ ಎಂದು ಪುನರ್ ಪದನಾಮಿಕರಿಸುವ ಕುರಿತು ಮನವಿಯನ್ನು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಸಂಘದ ಅಧ್ಯಕ್ಷರು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರಿಗೆ ತೆನ್ನಿರ ಮೈನಾ ರವರ ಮುಖೇನ ಸಲ್ಲಿಸಿದರು.











