ಮಡಿಕೇರಿ ನ.30 NEWS DESK : ಮೂರ್ನಾಡು ವೃತ್ತಕ್ಕೆ ಒಳಪಡುವ ಹೂಕಾಡು ಅಂಗನವಾಡಿ ಕೇಂದ್ರದಲ್ಲಿ ಸಮುದಾಯದ ಸಹಕಾರದಿಂದ ಬಾಲಮೇಳ ಕಾರ್ಯಕ್ರಮ ನಡೆಯಿತು. ಕೇಂದ್ರದ ಪುಟಾಣಿ ಚಾತ್ವಿಕ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಛದ್ಮವೇಷ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಬಗೆಬಗೆಯ ವೇಷ ಧರಿಸಿ ಪಾಲ್ಗೊಂಡ ಪುಟಾಣಿಗಳು ಗಮನ ಸೆಳೆದರು. ಕಾಳು ಹೆಕ್ಕುವ ಸ್ಪರ್ಧೆ, ಕಪ್ಪೆ ಜಿಗಿತ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಪ್ಪೆ ಜಿಗಿತದಲ್ಲಿ ದಕ್ಷಿಕ ಎಂ.ವೈ. ಪ್ರಥಮ, ದೇಶಿಕ ಕೆ.ಎಸ್. ದ್ವಿತೀಯ, ಲಿಯಾನ ಪಿ.ಎಲ್. ತೃತೀಯ, ಮತ್ತು ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಚಾತ್ವಿಕ್ ಪ್ರಥಮ , ತ್ರಿಶೂಲ್ ದ್ವಿತೀಯ, ದಕ್ಷಿಕಾ ತೃತೀಯ ಬಹುಮಾನ ಪಡೆದರು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾರ್ಗದರ್ಶನದಂತೆ ಅಂಗನವಾಡಿ ಕಾರ್ಯಕರ್ತೆ ಜಯಶ್ರೀ, ಸಹಾಯಕಿ ಲೀಲಾ ಅವರ ಪರಿಶ್ರಮದಿಂದ ಎಲ್ಲಾ ಮಕ್ಕಳ ಹೆಸರಿನಲ್ಲಿ ಪೋಷಕರಿಂದ ತರಕಾರಿ ಕುಂಡಗಳನ್ನು ಕೇಂದ್ರಕ್ಕೆ ಪಡೆಯಲಾಯಿತು. ಪೋಷಕರಾದ ಸತೀಶ್ ಸಿಹಿ ವಿತರಿಸಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಯಶೋಧ, ಬಾಲವಿಕಾಸ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು, ಗ್ರಾಮದ ಹಿರಿಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.











