ಮಡಿಕೇರಿ NEWS DESK ಡಿ.1 : ಮಡಿಕೇರಿ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕನ್ನಡ ಸಾಹಿತ್ಯ ಪರಿಷತ್ ಭವನದ ಯೋಜನೆಗೆ ಅನುದಾನ ದೊರಕಿಸಿಕೊಡುವುದರೊಂದಿಗೆ ಅಗತ್ಯ ಸಹಕಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಎಸ್.ಭೋಸರಾಜು ಭರವಸೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರ ನೇತೃತ್ವದ ನಿಯೋಗ ನಗರದಲ್ಲಿ ಸಚಿವರನ್ನು ಭೇಟಿಯಾಗಿ ಸುದರ್ಶನ ಅತಿಥಿ ಗೃಹದ ಬಳಿ ಇರುವ ಪರಿಷತ್ ನ ನಿವೇಶನದಲ್ಲಿ ಭವನ ನಿರ್ಮಿಸುವ ಯೋಜನೆ ಇದ್ದು, ಭವನ ನಿರ್ಮಾಣ ಸಮಿತಿಯ ಮಹಾಪೋಷಕರಾಗುವಂತೆ ಕೋರಿಕೊಂಡಿತು.
ಈ ಸಂದರ್ಭ ಮಾತನಾಡಿದ ಸಚಿವ ಎಂ.ಎಸ್.ಭೋಸರಾಜು ಅವರು ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದರೊಂದಿಗೆ ಸರಕಾರದ ಮಟ್ಟದಲ್ಲಿ ವ್ಯವಹರಿಸುವುದಾಗಿ ತಿಳಿಸಿದರು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ದೊರಕಿಸಿಕೊಡಲಾಗುವುದು, ಅಲ್ಲದೆ ಜಿಲ್ಲಾ ಮಟ್ಟದಲ್ಲಿ ಪೂರ್ವಭಾವಿ ಸಭೆ ನಡೆಸಿ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು. ಸರಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಗೌರವ ಕಾರ್ಯದರ್ಶಿಗಳಾದ ಎಸ್.ಐ.ಮುನಿರ್ ಅಹಮ್ಮದ್, ರೇವತಿ ರಮೇಶ್, ಕೋಶಾಧಿಕಾರಿಗಳಾದ ಸಂಪತ್ ಕುಮಾರ್ ಎಸ್.ಎಸ್, ಸಂಘಟನಾ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.









