ಮಡಿಕೇರಿ ಡಿ.2 NEWS DESK : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯದಲ್ಲಿ ಡಿ.20 ರಂದು ನಡೆಯಲಿದೆ. ನಮ್ಮ ಜಿಲ್ಲೆಗೆ ಅತಿ ಹತ್ತಿರದ ಜಿಲ್ಲೆಯಲ್ಲಿ ಸಮ್ಮೇಳನ ನಡೆಯಲಿದ್ದು, ಸಾಹಿತ್ಯ ಪರಿಷತ್ ಸದಸ್ಯರು, ಅಧ್ಯಾಪಕರು, ಸರ್ಕಾರಿ ನೌಕರರು, ಕನ್ನಡ ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನಕ್ಕೆ ಭೇಟಿ ನೀಡಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮನವಿ ಮಾಡಿದ್ದಾರೆ. ಈ ಸಮ್ಮೇಳನದಲ್ಲಿ ಕನ್ನಡ ನಾಡು ನುಡಿ, ಪ್ರಸ್ತುತ ಸಮಸ್ಯೆಗಳು ಕುರಿತು ಉಪನ್ಯಾಸಗಳು, ಕವಿಗೋಷ್ಠಿಗಳು, ಮತ್ತು ಪುಸ್ತಕ ಮೇಳವನ್ನು ಒಳಗೊಂಡಿರುತ್ತದೆ. ಈ ಕಾರ್ಯಕ್ರಮವು ಕರ್ನಾಟಕ, ಇತರ ರಾಜ್ಯಗಳು ಮತ್ತು ವಿದೇಶಗಳಿಂದ ಬಹುಸಂಖ್ಯೆಯಲ್ಲಿ ಭಾಗವಹಿಸುವವರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ಭಾಷೆ, ಸಾಹಿತ್ಯ, ಕಲಾ, ಸಂಸ್ಕೃತಿ ಮತ್ತು ಸಂಗೀತವನ್ನು ಉಳಿಸುವ ಮತ್ತು ಅಭಿವೃದ್ಧಿ ಮಾಡುವ ಉದ್ದೇಶದಿಂದ ಲೇಖಕರು, ಕವಿಗಳು ಮತ್ತು ಕನ್ನಡಿಗರ ಸಮ್ಮೇಳನವಾಗಿದೆ. ಸಮ್ಮೇಳನಕ್ಕೆ ಹೋಗಲಿಚ್ಚಿಸುವವರು ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳುವ ಮೂಲಕ ನಾಲ್ಕು ದಿನಗಳ ವಸತಿ ಊಟೋಪಚಾರ ಮತ್ತು ಸಮ್ಮೇಳನದ ಕಿಟ್ ಪಡೆಯಲು ಅವಕಾಶವಿರುತ್ತದೆ. ಸಮ್ಮೇಳನದ ಪ್ರತಿನಿಧಿ ಶುಲ್ಕ ರೂ.600 ಆಗಿರುತ್ತದೆ. ನೋಂದಣಿ ಮಾಡಿಕೊಳ್ಳಲು ಈ ಕೆಳಗೆ ನೀಡಿರುವ ವೆಬ್ ಸೈಟ್ ನಲ್ಲಿ ಅವಕಾಶವಿರುತ್ತದೆ. ಅಲ್ಲದೆ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು. 9448346276 ಮತ್ತು 9900609753 ನೋಂದಾಯಿಸಲು ಅಗತ್ಯವಿರುವ ಲಿಂಕ್ https://kannadasahithyaparishattu.in/sammelana2024











