ಮಡಿಕೇರಿ ಡಿ.2 NEWS DESK : ಹೆಚ್‍ಐವಿ ಸೋಂಕು ತಡೆಗಟ್ಟಲು ಜನಸಾಮಾನ್ಯರಲ್ಲಿ ಸೂಕ್ತ ಅರಿವು ಹಾಗೂ ಜಾಗೃತಿ ಮೂಡಿಸುವುದಕ್ಕಾಗಿ ಹಾಗೂ ಇದನ್ನು ಎದುರಿಸಲು ಮುಂದಿರುವ ಸವಾಲುಗಳ ಬಗ್ಗೆ ಚಿಂತಿಸುವ ದಿನ ಇದಾಗಿದೆ ಎಂದು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಮಡಿಕೇರಿ ಲಯನ್ಸ್ ಸಂಸ್ಥೆ, ರೋಟರಿ ಸಂಸ್ಥೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಎಫ್‍ಎಂಕೆಎಂಸಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ‘ಹಕ್ಕುಗಳನ್ನು ಪಡೆಯಲು ಸರಿಯಾದ ಮಾರ್ಗ ಅನುಸರಿಸೋಣ, ನನ್ನ ಆರೋಗ್ಯ ನನ್ನ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ‘ವಿಶ್ವ ಏಡ್ಸ್ ದಿನದ’ ವಿಶ್ವ ಏಡ್ಸ್ ದಿನದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ ಹೆಚ್‍ಐವಿ ಏಡ್ಸ್ ನಿಯಂತ್ರಣ ಕುರಿತು ಸರ್ಕಾರದ ಜತೆ ಸರ್ಕಾರೇತರ ಸಂಘ ಸಂಸ್ಥೆಗಳು ಕೈಗೊಂಡ ಕ್ರಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ‘ಆರೋಗ್ಯ ಮಾನವನ ಹಕ್ಕು’ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಪಡೆಯುವ ಹಕ್ಕಿದೆ. ಅದರಂತೆ ಹೆಚ್‍ಐವಿ ಸೋಂಕಿತರಿಗೆ ಯಾವುದೇ ಕಳಂಕ ತಾರತಮ್ಯ, ಲಿಂಗ ಭೇದ, ಎಚ್‍ಐವಿ ಸ್ಥಿತಿ ಮತ್ತಿತರವನ್ನು ಪರಿಗಣಿಸದೆ ಎಲ್ಲಾ ಆರೋಗ್ಯ ಸೇವೆಗಳು-ಎಚ್‍ಐವಿ ತಡೆ ಚಿಕಿತ್ಸೆ ಮತ್ತು ಆರೈಕೆ ಸೇವೆ ಒದಗಿಸುವುದು. ಅವರಿಗೂ ಕೂಡ ಎಲ್ಲಾ ಆರೋಗ್ಯದ ಸೇವೆಗಳನ್ನು ಪಡೆಯುವ ಹಕ್ಕಿದೆ ಎಂದರು. ಪ್ರತಿಯೊಬ್ಬರ ಆರೋಗ್ಯದ ಹಕ್ಕನ್ನು ರಕ್ಷಿಸುವ ಮತ್ತು ಹೊಸ ಸೋಂಕುಗಳನ್ನು ಕಡಿಮೆ ಮಾಡುವ ಮೂಲಕ ಏಡ್ಸ್ ಮುಕ್ತ ಜನಾಂಗವನ್ನು ಸೃಷ್ಠಿಸಬಹುದು ಎಂದು ಡಾ.ಸತೀಶ್ ಕುಮಾರ್ ಹೇಳಿದರು. ವಿಶ್ವ ಏಡ್ಸ್ ದಿನ ಪ್ರಯುಕ್ತ ಜಾಥಾವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಶಾಂತಿ.ಜಿ ಉದ್ಘಾಟಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಆನಂದ್.ಎನ್, ಲಯನ್ಸ್ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆ ಅಧ್ಯಕ್ಷರು ಹಾಗೂ ರೆಡ್‍ಕ್ರಾಸ್ ಸಂಸ್ಥೆಯ ರವೀಂದ್ರ ರೈ ಇತರರು ಇದ್ದರು. ಜಾಥಾದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು, ಎಫ್.ಎಮ್.ಕೆ.ಎಮ್.ಸಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಬಿ.ಎಸ್ಸಿ. ನರ್ಸಿಂಗ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೊಡಗು, ಸರ್ಕಾರಿ ಮಹಿಳಾ ಕಾಲೇಜು ಮಡಿಕೇರಿ ಭಾಗವಹಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶಾಂತಿ ಅವರು ಪ್ರಮಾಣ ವಚನ ಬೋಧಿಸಿದರು. ನಂತರ ಮೇಣದ ಬತ್ತಿ ಉರಿಸಿ ಎಚ್.ಐ.ವಿ ಸೋಂಕಿನಿಂದ ಮರಣ ಹೊಂದಿದವರಿಗೆ ಸಂತಾಪವನ್ನು ಕ್ಯಾಂಡಲ್ ಲೈಟ್ ಕಾರ್ಯಕ್ರಮದ ಮುಖಾಂತರ ಮಾಡಲಾಯಿತು. ಜಿಲ್ಲೆಯಲ್ಲಿ ಎಚ್.ಐ.ವಿ/ಏಡ್ಸ್ ನಿಯಂತ್ರಣ ಹಾಗೂ ತಡೆ ಕಾರ್ಯಕ್ರಮದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಸಂಘ ಸಂಸ್ಥೆಗಳು, ರೆಡ್ ರಿಬ್ಬನ್ ಕಾಲೇಜುಗಳು, ಐ.ಸಿ.ಟಿ.ಸಿ ಕೇಂದ್ರಗಳಿಗೆ ಸನ್ಮಾನ ಮಾಡಲಾಯಿತು. ರೆಡ್ ರಿಬ್ಬನ್ ಕಾಲೇಜುಗಳು, ಸಂತ ಜೋಸೆಫರ ಕಾಲೇಜು, ಸೋಮವಾರಪೇಟೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಡಿಕೇರಿ, ಸಂಘ ಸಂಸ್ಥೆಗಳು, ರೋಟರಿ, ಮಿಸ್ಟಿ ಹಿಲ್ಸ್ ಮಡಿಕೇರಿ, ಲಯನ್ಸ್ ಸಂಸ್ಥೆ, ಮಡಿಕೇರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕೊಡಗು, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕೊಡಗು ಐಸಿಟಿಸಿ, ಐಸಿಟಿಸಿ -ಐಸಿಟಿಸಿ-1 ಜಿಲ್ಲಾ ಆಸ್ಪತ್ರೆ, ಮಡಿಕೇರಿ, ಐಸಿಟಿಸಿ ಸಮುದಾಯ ಆರೋಗ್ಯ ಕೇಂದ್ರ ಗೋಣಿಕೊಪ್ಪ, ಐಸಿಟಿಸಿ- ಐಸಿಟಿಸಿ-2 ಜಿಲ್ಲಾ ಆಸ್ಪತ್ರೆ, ಮಡಿಕೇರಿ, ಐಸಿಟಿಸಿ ಸಾರ್ವಜನಿಕ ಆಸ್ಪತ್ರೆ ಸೋಮವಾರಪೇಟೆ, ಐಸಿಟಿಸಿ ಸಾರ್ವಜನಿಕ ಆಸ್ಪತ್ರೆ ವೀರಾಜಪೇಟೆ, ಐಸಿಟಿಸಿ ಸಮುದಾಯ ಆರೋಗ್ಯ ಕೇಂದ್ರ ಕುಶಾಲನಗರ, ಎ.ಆರ್.ಟಿ ಕೇಂದ್ರ ಜಿಲ್ಲಾ ಆಸ್ಪತ್ರೆ, ಮಡಿಕೇರಿ, ರಕ್ತನಿಧಿ ಕೇಂದ್ರ- ಜಿಲ್ಲಾ ಆಸ್ಪತ್ರೆ, ಮಡಿಕೇರಿ, ವಿಹಾನ್, ಆರೈಕೆ ಮತ್ತು ಬೆಂಬಲ ಕೇಂದ್ರ, ಮಡಿಕೇರಿ. ಅಶೋದಯ ಸಮಿತಿ, ಕೊಡಗು ಜಿಲ್ಲೆ, ಒ.ಡಿ.ಪಿ ಸ್ನೇಹಾಶ್ರಯ ಸಮಿತಿ, ಕೊಡಗು ಜಿಲ್ಲೆ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಮಧುಸೂದನ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾದ ಪೊನ್ನಚನ ಮಧು ಸೋಮಣ್ಣ, ಲಯನ್ ನಟರಾಜು ಕೆಸ್ತೂರು, ಲಯನ್ಸ್ ಸಂಸ್ಥೆ ಅಧ್ಯಕ್ಷರು ಇತರರು ಇದ್ದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬಿ.ಎಸ್ಸಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಮಂಜುಳ, ವೈದ್ಯಾಧಿಕಾರಿ ಡಾ.ನೀರಜ್ ಇದ್ದರು. ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕರಾದ ಸುನೀತ ಮುತ್ತಣ್ಣ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶಾಂತಿ ವಂದಿಸಿದರು. ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಾಥ್ ನಡೆಸಿಕೊಟ್ಟರು.