ಮಡಿಕೇರಿ ಡಿ.2 NEWS DESK : ಶೋಷಿತ ಸಮುದಾಯಗಳ ಗಟ್ಟಿ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಿ, ಅವರ ಧ್ವನಿ ಅಡಗಿಸಬೇಕೆನ್ನುವ ವಿರೋಧ ಪಕ್ಷಗಳ ಷಡ್ಯಂತ್ರವನ್ನು ಜನರ ಮುಂದೆ ತರುವ ಮೂಲಕ, ಅವರಲ್ಲಿ ಜಾಗೃತಿ ಮೂಡಿಸಿ ಮುಖ್ಯಮಂತ್ರಿಗಳ ಕೈ ಬಲಪಡಿಸುವ ಚಿಂತನೆಗಳಡಿ ಡಿ.5 ರಂದು ಹಾಸನದಲ್ಲಿ ‘ಸ್ವಾಭಿಮಾನಿ’ ಸಮಾವೇಶವನ್ನು ಆಯೋಜಿಸಿರುವುದಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷರಾದ ಕೆ.ಎಸ್.ಶಿವರಾಂ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆಗಳ ಪರವಾಗಿ ಮಾತನಾಡಿದ ಅವರು, ಕಳೆದ ನಾಲ್ಕೂ ದಶಕಗಳಿಗಿಂತಲೂ ಹೆಚ್ಚಿನ ಕಾಲ ನಿಷ್ಕಳಂಕ ರಾಜಕಾರಣ ಮಾಡುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿ, ಹಿಂದುಳಿದ, ದಲಿತ, ಶೋಷಿತ ಸಮುದಾಯದ ಶಕ್ತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ದ್ವಿತೀಯ ಅವಧಿಗೆ ಮುಖ್ಯ ಮಂತ್ರಿಯಾಗಿ ಆಯ್ಕೆಯಾದ ಬಳಿಕ ವಿವಿಧ ಯೋಜನೆಗಳ ಮೂಲಕ ಸಮಾಜದ ಎಲ್ಲಾ ಸ್ತರಗಳ ಜನರ ಅಭ್ಯಯದಯಕ್ಕೆ ಸಿದ್ದರಾಮಯ್ಯ ಶ್ರಮಿಸುತ್ತಿದ್ದಾರೆ. ಇದೇ ರೀತಿಯಲ್ಲಿ ಇವರು ತಮ್ಮ ಅತ್ಯುತ್ತಮವಾದ ಆಡಳಿತವನ್ನು ಮುಂದುವರಿಸಿದಲ್ಲಿ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಉಂಟಾದೀತೆನ್ನುವ ಆತಂಕದಿಂದ ಇದೀಗ ವಿರೋಧ ಪಕ್ಷಗಳು ಮುಡಾ, ವಾಲ್ಮೀಕಿ ಪ್ರಕರಣಗಳನ್ನು ಮುಂದಿಟ್ಟು ಷಡ್ಯಂತ್ರ ರೂಪಿಸುತ್ತಿರುವುದಾಗಿ ಆರೋಪಿಸಿದರು. ಶೋಷಿತ ಸಮುದಾಯದ ಶಕ್ತಿಯಾಗಿರುವ ಸಿದ್ದರಾಮಯ್ಯ ಅವರನ್ನು ನಾಯಕತ್ವದಿಂದ ದೂರ ಸರಿಸಿದಲ್ಲಿ, ಅಹಿಂದ ನಾಶಪಡಿಸಬಹುದೆನ್ನುವ ದುರುದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರಗಳನ್ನು ಮಾಡುತ್ತಿವೆ. ಈ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸ್ವಾಭಿಮಾನಿ ಸಮಾವೇಶ ಆಯೋಜಿತವಾಗುತ್ತಿದೆ ಎಂದರು.ವಿರೋಧ ಪಕ್ಷಗಳ ಯಾವುದೇ ಷಡ್ಯಂತ್ರಗಳು ಫಲಕಾರಿಯಾಗಲು ಅವಕಾಶವನ್ನು ನೀಡದಿರುವ ಉದ್ದೇಶದಿಮದ ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲ ಶೋಷಿತ ಸಮುದಾಯಗಳು ಒಂದಾಗಿ ಸ್ವಾಭಿಮಾನಿ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದ ಶಿವರಾಂ, ಇನ್ನಾದರು ಬಿಜೆಪಿ ಮತ್ತು ಜೆಡಿಎಸ್ ತಮ್ಮ ನೀತಿಗೆಟ್ಟ ರಾಜಕೀಯವನ್ನು ಬಿಟ್ಟು ನೀತಿಯುತವಾದ ನೈತಿಕತೆಯ ರಾಜಕಾರಣ ಮಾಡಲೆಂದು ತಿಳಿಸಿದರು. ಹಾಸನದಲ್ಲಿ ಆಯೋಜಿತಾಗಿರುವ ಸ್ವಾಭಿಮಾನಿ ಸಮಾವೇಶದಲ್ಲಿ 5 ಲಕ್ಷಕ್ಕೂ ಹೆಚ್ಚಿನ ಮಂದಿ ಪಾಲ್ಗೊಳ್ಳ್ಳುವ ವಿಶ್ವಾಸವಿದೆ. ಕೊಡಗು ಜಿಲ್ಲೆಯಿಂದಲು ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕೆಂದು ಮನವಿ ಮಾಡಿದರು. ಕಾಂಗ್ರೆಸ್ ಮುಖಂಡ ಜೆ.ಜೆ.ಆನಂದ ಮಾತನಾಡಿ, ಸಿದ್ದರಾಮಯ್ಯ ಅವರು ತಮ್ಮ ಬದುಕಿನುದ್ದಕ್ಕು ಜನರ ನಡುವಿದ್ದುಕೊಂಡೆ ರಾಜಕಾರಣವನ್ನು ಮಾಡಿದ ವ್ಯಕ್ತಿ. ರಾಜ್ಯ ರಾಜಕಾರಣದಲ್ಲಿ ಉಪ ಮುಖ್ಯಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ಹಾಗೂ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯ ನಿರ್ವಹಿಸಿರುವ ಸಿದ್ದರಾಮಯ್ಯ ಅವರು ಅತ್ಯಂತ ಪ್ರಾಮಾಣಿಕವಾದ ನಡೆಗಳ ಮೂಲಕ ಜನಮನಕ್ಕೆ ಹತ್ತಿರವಾದವರು. ದ್ವಿತೀಯ ಅವಧಿಯಲ್ಲ್ಲಿ ಮುಖ್ಯ ಮಂತ್ರಿಗಳಾದ ಬಳಿಕ ಅವರು ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳು ಬಡವರ್ಗದ ಜನಕ್ಕೆ ಅತ್ಯಮತ ಯಪಯುಕ್ತವಾಗಿದೆ. ಇವರ ಜನಪರವಾದ ಆಡಳಿತದ ಹಿನ್ನೆಲೆಯಲ್ಲೆ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು ಸಾಧಿಸಲು ಸಾಧ್ಯವಾಯಿತೆಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷರಾದ ಯೋಗೇಶ್ ಉಪ್ಪಾರ, ಮೈಸೂರು ಜಿಲ್ಲಾ ಅಹಿಂದ ಮುಖಂಡರಾದ ಎಂ.ಆರ್.ನಾಗೇಶ್, ಮೈಸೂರು ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ರವಿನಂದನ್ ಹಾಗೂ ಲೋಕೇಶ್ ಕುಮಾರ್ ಉಪಸ್ಥಿತರಿದ್ದರು.