ಮಡಿಕೇರಿ ಡಿ.3 NEWS DESK : ವಿಶೇಷಚೇತನರು ವಿಕಲತೆ ಇದೆ ಎಂದು ಕೊರಗದೆ ಸಾಧನೆಯತ್ತ ಮುನ್ನಡೆಯಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಸಲಹೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಜನ ಸೇವಾ ಕ್ರೀಡಾ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದ ಯುವ ಸಂಘ, ಕೊಡಗು ಶಾಖೆ ಮತ್ತು ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ವಿಶೇಷ ಮಕ್ಕಳ ಶಾಲೆಗಳು ಇವರ ಸಂಯುಕ್ತ ಆಶ್ರಯದಲ್ಲಿ ‘ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವಕ್ಕೆ ಉತ್ತೇಜನ’ ಎಂಬ ಘೋಷವಾಕ್ಯದೊಂದಿಗೆ ನಗರದ ಓಂಕಾರ ಸದನದಲ್ಲಿ ಮಂಗಳವಾರದ ನಡೆದ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೆಲವರು ಹುಟ್ಟಿನಿಂದಲೇ ವಿಶೇಷಚೇತನರಾಗುತ್ತಾರೆ. ಆದ್ದರಿಂದ ಧೃತಿಗೆಡದೆ ಆರೋಗ್ಯ, ಶಿಕ್ಷಣದತ್ತ ಗಮನಹರಿಸಿ ಹೆಚ್ಚಿನ ಸಾಧನೆ ಮಾಡಲು ಪ್ರಯತ್ನಿಸಬೇಕು ಎಂದು ಶುಭ ಅವರು ಹೇಳಿದರು. ವಿವಿಧ ಕ್ಷೇತ್ರಗಳಲ್ಲಿ ವಿಶೇಷಚೇತನರಿಗೆ ವಿಶೇಷ ಆದ್ಯತೆ ನೀಡುವುದರ ಜೊತೆಗೆ ಪ್ರೋತ್ಸಾಹಿಸಬೇಕು. ವಿಶೇಷಚೇತನರನ್ನು ಕೀಳರಿಮೆಯಿಂದ ನೋಡಬಾರದು. ಜೊತೆಗೆ ಕಡೆಗಣಿಸಬಾರದು. ಇವರಿಗೂ ಸಹ ಶ್ರೀಸಾಮಾನ್ಯರಂತೆ ಬದುಕುವ ಹಕ್ಕಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು. ಜೀವನದಲ್ಲಿ ಅನುಕಂಪ ನಿರೀಕ್ಷಿಸದೆ ಆತ್ಮವಿಶ್ವಾಸದಿಂದ ಜೀವನ ಸಾಗಿಸಬೇಕು. ಮೂಢ ನಂಬಿಕೆಯಿಂದ ದೂರವಿರಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಲಹೆ ನೀಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಂಜುಂಡಯ್ಯ ಮಾತನಾಡಿ, ವಿಕಲಚೇತನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ 30 ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗಿದೆ. ಮುಂದೆಯೂ ಸಹ ಆರೋಗ್ಯ ಶಿಬಿರ ನಡೆಯಲಿದ್ದು, ವಿಶೇಷ ಚೇತನರು ಪ್ರಮಾಣಪತ್ರ ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು ಎಂದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆ ವತಿಯಿಂದ ವಿಕಲಚೇತನರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಮನೆ ಮನೆಗೂ ಭೇಟಿ ನೀಡಲಾಗುತ್ತದೆ. ಆದ್ದರಿಂದ ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು. ಕೆಲವರು ಹುಟ್ಟಿನಿಂದ ವಿಶೇಷಚೇತನರಾಗಿರುತ್ತಾರೆ. ಅದನ್ನು ದೌರ್ಬಲ್ಯ ಎಂದು ಭಾವಿಸದೆ ಸಾಧನೆ ಮಾಡುವತ್ತ ಗಮನಹರಿಸಬೇಕು ಎಂದರು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ವಿಮಲ ಕೆ.ಜಿ. ಅವರು ಮಾತನಾಡಿ ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು, ಸಮಾನ ಅವಕಾಶ ಹಾಗೂ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು. ಪ್ರತಿಯೊಂದು ಕ್ಷೇತ್ರದಲ್ಲೂ ವಿಶೇಷಚೇತನರು ಛಾಪು ಮೂಡಿಸುತ್ತಿದ್ದು, ಇವರಿಗೆ ಪ್ರೋತ್ಸಾಹ ಮತ್ತು ಬೆಂಬಲವನ್ನು ಇಲಾಖೆಯಿಂದ ನೀಡಲಾಗುತ್ತಿದೆ ಎಂದರು. ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ನಿರ್ದೇಶಕರಾದ ಎಸ್.ಆರ್.ದೀಪಾಶ್ರೀ ಮಾತನಾಡಿ, ವಿಶೇಷಚೇತನರನ್ನು ಮುಖ್ಯವಾಹಿನಿಗೆ ತರಲು ಹಾಗೂ ಸ್ವಾವಲಂಬಿಗಳಾಗಿ ಮಾಡಲು ಅವಕಾಶವಿದೆ. ಆ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಲಾಗುವುದು ಎಂದರು. ವಿಶೇಷಚೇತನರ ಸಂಘದ ಅಧ್ಯಕ್ಷರಾದ ಜೆ.ಎ.ಮಹೇಶ್ವರ ಅವರು ಮಾತನಾಡಿ ವಿಕಲಚೇತನರ ನೋವಿಗೆ ಎಲ್ಲರೂ ಸ್ಪಂದಿಸುವಂತಾಗಬೇಕು. ಸಮಸ್ಯೆಗಳನ್ನು ಆಲಿಸುವಂತಾಗಬೇಕು ಎಂದು ಕೋರಿದರು. ಗಿರೀಶ್, ಗೀತಾ, ಶಿವರಾಜ್, ಇತರರು ಮಾತನಾಡಿದರು. ವಿಶೇಷಚೇತನ ಕುಶ್ ಪ್ರಾರ್ಥಿಸಿದರು, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರೂಪಿಸಿ, ವಂದಿಸಿದರು.