ಮಡಿಕೇರಿ ಡಿ.6 NEWS DESK : ಸಾಮಾಜಿಕ ಜಾಲತಾಣದಲ್ಲಿ ವೀರ ಸೇನಾನಿಗಳಿಗೆ ಅವಹೇಳನ ಮಾಡಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಘಟಕದಿಂದ ಮಡಿಕೇರಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಯಿತು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಘಟಕದ ಅಧ್ಯಕ್ಷ ಕೊಟ್ಟುಕತ್ತಿರ ಪಿ.ಸೋಮಣ್ಣ ನೇತೃತ್ವದಲ್ಲಿ ಮಾಜಿ ಸೈನಿಕರು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ, ನಂತರ ಮೆರವಣಿಗೆ ಮೂಲಕ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದರು. ಫೀ.ಮಾ.ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಇಬ್ಬರು ಮಹಾನ್ ಸೇನಾಧಿಕಾರಿಗಳನ್ನು ಅಪಮಾನಿಸಿದವರ ಬಗ್ಗೆ ಸವಿಸ್ತಾರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಸಂಘದ ಕಾರ್ಯದರ್ಶಿ ಸಿ.ಜಿ.ತಿಮ್ಮಯ್ಯ, ಸಹ ಕಾರ್ಯದರ್ಶಿ ಎಂ.ಕೆ.ನಾಚಪ್ಪ, ಸಂಚಾಲಕ ನಾಟೋಳಂಡ ಸೋಮಯ್ಯ ಹಾಗೂ ಸಹ ಸಂಚಾಲಕಿ ಚಂದನ ಸೇರಿದಂತೆ ವಿವಿಧ ಕೊಡವ ಸಮಾಜಗಳ ಪ್ರಮುಖರು, ಮಾಜಿ ಸೈನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿದರು.