ಮಡಿಕೇರಿ ಡಿ.6 NEWS DESK : ಮಡಿಕೇರಿ ದಸರಾ ಆಚರಣೆಗೆ ಸರಕಾರ ಮಂಜೂರು ಮಾಡಿರುವ ರೂ.1.50 ಕೋಟಿ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಲು ಜಿಲ್ಲೆಯ ಶಾಸಕರು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮಡಿಕೇರಿ ದಸರಾ ಸಮಿತಿಯ ಉಪಾಧ್ಯಕ್ಷ ಬಿ.ಎಂ.ರಾಜೇಶ್ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ದಸರಾ ಜನೋತ್ಸವ ಮುಗಿದು ಎರಡು ತಿಂಗಳಾಗಿದ್ದರು ಇನ್ನೂ ಕೂಡ ಸರಕಾರ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಹಣ ಬಾರದೆ ಇರುವುದರಿಂದ ದಶಮಂಟಪ ಸಮಿತಿಗಳು ಸಾಲದ ಸಂಕಷ್ಟಕ್ಕೆ ಸಿಲುಕಿದ್ದು, ಶಾಸಕರು ತಕ್ಷಣ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ. ದಸರಾ ಜನೋತ್ಸವದ ಆಕರ್ಷಣೆಯಾದ ನಗರದ ದಶ ದೇವಾಲಯಗಳ ಮಂಟಪಕ್ಕಾಗಿ ಪ್ರತಿಯೊಂದು ಮಂಟಪ ಸಮಿತಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿದೆ. ವಿಜೃಂಭಣೆಯ ದಶ ಮಂಟಪಗಳ ಶೋಭಾಯಾತ್ರೆಗಾಗಿ ಸಾಲ ಮಾಡಿ ಹಗಲಿರುಳೆನ್ನದೆ ಶ್ರಮಿಸಲಾಗಿದೆ. ದಸರಾಕ್ಕೆ ವರ್ಣರಂಜಿತ ಆಕರ್ಷಣೆ ನೀಡಿದ ದಶಮಂಟಪ ಸಮಿತಿಗಳು ಇಂದು ಸಂಕಷ್ಟಕ್ಕೆ ಸಿಲುಕಿವೆ. ದೊಡ್ಡ ಮೊತ್ತದ ಅನುದಾನ ಮಂಜೂರು ಮಾಡಿಸಿರುವುದಾಗಿ ಹೆಮ್ಮೆ ವ್ಯಕ್ತಪಡಿಸಿದ್ದ ಶಾಸಕರು ಇಂದು ಸಮಿತಿಗಳ ನೆರವಿಗೆ ಬರಬೇಕಾಗಿದೆ. ಆದಷ್ಟು ಶೀಘ್ರ ಸರಕಾರದೊಂದಿಗೆ ಚರ್ಚಿಸಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ದಸರಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಜಿಲ್ಲಾಧಿಕಾರಿಗಳು ಕೂಡ ಈ ಬಗ್ಗೆ ಆಸಕ್ತಿ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರಕಾರ ಹಣ ಬಿಡುಗಡೆ ಮಾಡುವುದಕ್ಕೆ ಮೀನಾ, ಮೇಷ ಎಣಿಸಿದರೆ ಮುಂದಿನ ದಿನಗಳಲ್ಲಿ ದಸರಾ ಜನೋತ್ಸವದ ಆಚರಣೆಗೆ ಯುವ ಸಮೂಹ ನಿರಾಸಕ್ತಿ ತೋರಬಹುದು ಮತ್ತು ಜನೋತ್ಸವ ಕಳೆಗುಂದಬಹುದು. ದಶ ದಿನಗಳ ದಸರಾ ಆಚರಣೆಯಿಂದ ಕೊಡಗಿನ ಪ್ರವಾಸೋದ್ಯಮ ಬೆಳವಣಿಗೆಯನ್ನು ಕಂಡಿದೆ, ಸರಕಾರಕ್ಕೆ ಸಾಕಷ್ಟು ಆದಾಯ ಲಭಿಸಿದೆ. ಆದರೆ ದಸರಾದ ಅದ್ದೂರಿತನಕ್ಕೆ ಕಾರಣಕರ್ತರಾದ ದಶಮಂಟಪ ಸಮಿತಿಗಳು ಇಂದು ನಿರ್ಲಕ್ಷಿಸಲ್ಪಟ್ಟಿವೆ. ಸರಕಾರ ತಕ್ಷಣ ಹಣ ಬಿಡುಗಡೆ ಮಾಡದಿದ್ದರೆ ಎಲ್ಲಾ ಸಮಿತಿಗಳು ಒಗ್ಗಟ್ಟಾಗಿ ಚರ್ಚಿಸಿ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದ್ದೇವೆ ಎಂದು ಬಿ.ಎಂ.ರಾಜೇಶ್ ತಿಳಿಸಿದ್ದಾರೆ.