ಮಡಿಕೇರಿ ಡಿ.7 NEWS DESK : ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಇದನ್ನು ನಿಯಂತ್ರಿಸದಿದ್ದಲ್ಲಿ ಕರ್ನಾಟಕ ಆದಿವಾಸಿಗಳ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಸಮಿತಿಯ ಜಿಲ್ಲಾಧ್ಯಕ್ಷ ವೈ.ಕೆ.ಗಣೇಶ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೌರ್ಜನ್ಯ ಪ್ರಕರಣಗಳ ಕುರಿತು ಆಯಾ ಪೊಲೀಸ್ ಠಾಣೆಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆಡಳಿತ ವ್ಯವಸ್ಥೆ ಹಣವಂತರ ಪರವಾಗಿದೆ, ಸಮಾಜದಲ್ಲಿ ಸಮಾನತೆ ಇಲ್ಲದಾಗಿದೆ. ಸಂವಿಧಾನದ ಆಶಯಗಳು ಈಡೇರುತ್ತಿಲ್ಲವೆಂದು ಟೀಕಿಸಿದರು. ಪೊಲೀಸ್ ಠಾಣೆಗಳಲ್ಲಿ ಕ್ರಮ ಕೈಗೊಳ್ಳದೆ ಇದ್ದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದರೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಮತ್ತು ತಪ್ಪಿತಸ್ಥರಿಗೆ ಶಿಕ್ಷಯಾಗುತ್ತಿಲ್ಲ. ಜಾತಿ ನಿಂದನೆ ಮಾಡಿದವರು ಕಾನೂನು ಕ್ರಮಕ್ಕೆ ಒಳಗಾಗದೆ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಆದಿವಾಸಿಗಳು ನಿತ್ಯ ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ದೌರ್ಜನ್ಯ ನಡೆಸಿದವರು ಬೆದರಿಕೆವೊಡ್ಡುತ್ತಿರುವುದರಿಂದ ಅನ್ಯಾಯಕ್ಕೊಳಗಾದವರು ದೂರು ನೀಡಲು ಮುಂದೆ ಬರುತ್ತಿಲ್ಲ. ಸರಕಾರ ಕೂಡ ಆದಿವಾಸಿಗಳ ರಕ್ಷಣೆಗೆ ಮುಂದಾಗುತ್ತಿಲ್ಲ, ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದೇವೆ ಎಂದು ಸರಕಾರ ಪ್ರಚಾರವನ್ನಷ್ಟೇ ಮಾಡುತ್ತಿದೆ. ಆದರೆ ಆದಿವಾಸಿಗಳು ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಯಾವುದೇ ಮೂಲಭೂತ ಸೌಕರ್ಯಗಳು ದೊರೆಯುತ್ತಿಲ್ಲವೆಂದು ಆರೋಪಿಸಿದರು. ಆದಿವಾಸಿಗಳನ್ನು ದೌರ್ಜನ್ಯ ಮುಕ್ತರನ್ನಾಗಿ ಮಾಡಲು ಸರಕಾರ ಮತ್ತು ಪೊಲೀಸ್ ಇಲಾಖೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಹೋರಾಟವನ್ನು ರೂಪಿಸುವುದಾಗಿ ವೈ.ಕೆ.ಗಣೇಶ್ ಎಚ್ಚರಿಕೆ ನೀಡಿದರು. ಬಿರುನಾಣಿಯ ನೆಲ್ಲಿಪಾರೆ ನಿವಾಸಿ ಜೆ.ಕೆ.ಅನುಪಮ ಮಾತನಾಡಿ ನಮ್ಮ ಜಾಗವನ್ನು ಕಬಳಿಸಲು ವ್ಯಕ್ತಿಯೊಬ್ಬರು ನಮ್ಮ ಮೇಲೆ ದೌರ್ಜನ್ಯ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಬಿರುನಾಣಿಯ ನೆಲ್ಲಿಪಾರೆ ನಿವಾಸಿ ಜೆ.ಕೆ.ದೇವಮ್ಮ ಉಪಸ್ಥಿತಿರಿದ್ದರು.











