ಮಡಿಕೇರಿ ಡಿ.9 NEWS DESK : ಶ್ರೀ ರಂಗಪಟ್ಟಣ-ಕುಶಾಲನಗರ ನಡುವಿನ ಉದ್ದೇಶಿತ ಚತುಷ್ಪಥ ಹೆದ್ದಾರಿ ಕಾಮಗಾರಿಯನ್ನು ಮುಂದಿನ 2-3 ತಿಂಗಳಿನಲ್ಲಿ ಆರಂಭಿಸಲಾಗುವುದು ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಹಿತಿ ನೀಡಿದರು. ನಗರದ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿ ಸಂಸದರ ನೂತನ ಕಚೇರಿಯನ್ನು ಹಿರಿಯ ವೈದ್ಯ ಡಾ.ಪಾಟ್ಕರ್ ಸೇರಿದಂತೆ ಗಣ್ಯರು ಉದ್ಘಾಟನೆ ಮಾಡಿದರು. ಬೆಳಿಗ್ಗೆ ಕಚೇರಿಯಲ್ಲಿ ವಿವಿಧ ಹೋಮ, ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಯದವೀರ್ ಒಡೆಯರ್, ಕೊಡಗು ಮುಖ್ಯ ಕ್ಷೇತ್ರವಾಗಿದ್ದು, ಇಲ್ಲಿಗೆ ಸಮಯ ನೀಡಬೇಕಾಗಿರುವುದು ಜನಪ್ರತಿನಿಧಿಯಾದ ನನ್ನ ಕರ್ತವ್ಯವಾಗಿದೆ. ಅಭಿವೃದ್ಧಿ ದೃಷ್ಟಿಯಲ್ಲಿ ಜನರಿಗೆ ನನ್ನ ಸಂಪರ್ಕ ಸಿಗುವ ಸಲವಾಗಿ ಕಚೇರಿ ಆರಂಭಿಸಲಾಗಿದ್ದು, ನಮ್ಮ ಸಲಹೆಗಾರರು ವಾರದ ಎಲ್ಲಾ ದಿನಗಳಲ್ಲೂ ಕಚೇರಿಯಲ್ಲಿ ಲಭ್ಯವಿರುತ್ತಾರೆ. ನಾನು ನನ್ನ ಕ್ಷೇತ್ರ ಪ್ರತಿನಿಧಿಸುವ ಮೈಸೂರು, ಕೊಡಗಿನ ಜನರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನನ್ನ ಸೇವೆಯನ್ನು ಮುಡಿಪಾಗಿಟ್ಟಿದ್ದೇನೆ ಎಂದು ಹೇಳಿದರು. ವಿಕಸಿತ ಭಾರತದಲ್ಲಿ ಕೊಡಗಿನ ಗ್ರಾಮ ಮಟ್ಟದ ಸೇವೆಗಳಿಗೆ ನಾನು ಸದಾ ಬದ್ಧನಾಗಿದ್ದೇನೆ. ಶೀಘ್ರದಲ್ಲೇ ಕೊಡಗಿನ ಕುಶಾಲನಗರದಿಂದ ಶ್ರೀರಂಗಪಟ್ಟಣದವರೆಗಿನ ಕೇಂದ್ರ ಹೆದ್ದಾರಿಯ ಕಾಮಗಾರಿಗೆ ಚಾಲನೆ ನೀಡಿ ಕೊಡಗಿನ ಜನತೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೋಡಲಾಗುವುದು ಎಂದು ತಿಳಿಸಿದರು. ಈಗಾಗಲೇ ಕೆಂದ್ರ ಸರಕಾರದ ಅನುಮೋದನೆ ನೀಡಿದ್ದು, ಇನ್ನು ಕೆಲ ದಿನಗಳಲ್ಲಿ ಓಊ-275 ನಲ್ಲಿ ಹೊಸ ಮೇಲ್ಸೇತುವೆ ಮತ್ತು ವರ್ಧಿತ ಸಂಚಾರ ನಿಯಮಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯ ನವೀಕರಣಗಳನ್ನು ಅನುಮೋದಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭ ಮಾಜಿ ಶಾಸಕರುಗಳಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಂ.ಲೋಕೇಶ್, ಮಹೇಶ್ ಜೈನಿ, ಜಿಲ್ಲಾ ವಕ್ತಾರರಾದ ಬಿ.ಕೆ.ಅರುಣ್ ಕುಮಾರ್, ತಳೂರು ಕಿಶೋರ್ ಕುಮಾರ್ ಸೇರಿದಂತೆ ಇತರ ಕಾರ್ಯಕರ್ತರು ಹಾಜರಿದ್ದರು.