ಗೋಣಿಕೊಪ್ಪ ಡಿ.12 NEWS DESK : ತಿತಿಮತಿ ಶ್ರೀರಾಮ ಸೇವಾ ಸಮಿತಿ ವತಿಯಿಂದ 13 ರಿಂದ 16 ರವರೆಗೆ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹನುಮ ಜಯಂತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಹನುಮ ಜಯಂತಿ ಆಚರಣೆ ಸಮಿತಿಯ ಅಧ್ಯಕ್ಷ ಚೆಕ್ಕೆರ ಮನುಕಾವೇರಪ್ಪ ತಿಳಿಸಿದ್ದಾರೆ. ಸದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.13 ರಂದು ಗಣಪತಿ ಹೋಮ ಮಾಡುವ ಮೂಲಕ ಬಾಳುಮನೆ ಗಣಪತಿ ದೇವಸ್ಥಾನದ ಬಳಿ ಹನುಮನ ಮೂರ್ತಿಯ ಪ್ರತಿಷ್ಠಾಪನೆ ಮಾಡಿ ಆರಾಧಿಸಲಾಗುತ್ತದೆ ಎಂದರು. ಡಿ.14 ರಂದು ಭಜನೆ, ಹನುಮಾನ್ ಚಾಲೀಸಾ ಪಠಣ, 15 ರಂದು ಸ್ಥಳೀಯ ಜನರಿಗೆ ಕ್ರೀಡಾ ಸ್ಪರ್ಧೆಗಳಾಗಿ ಭಾರದ ಗುಂಡು ಎಸೆಯುವುದು, ಹಗ್ಗ ಜಗ್ಗಾಟ, ಇನ್ನಿತರ ಕ್ರೀಡೆಗಳು ನಡೆಯಲಿದೆ. ಜೊತೆಗೆ ಸಂಜೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಸಂಜೆ ಮತ್ತು ದಿಪೋತ್ಸವ ನಡೆಯಲಿದೆ. ಡಿ.16 ರಂದು ಬೆಳಗ್ಗೆ 10 ಗಂಟೆಗೆ ಬಾಳುಮನೆ ಗಣಪತಿ ದೇವಸ್ಥಾನದಿಂದ ಹನುಮನ ಮೂರ್ತಿ ಹೊತ್ತು ವಿವಿಧ ಕಲಾ ಪ್ರಕಾರಗಳ ಪ್ರದರ್ಶನದೊಂದಿಗೆ ಬೃಹತ್ ಮೆರವಣಿಗೆ ನಡೆಯಲಿದೆ. ನಂತರ ಪ್ರಕಾಶ್ ಮಲ್ಪೆ ಅವರು ಹಿಂದೂ ಧರ್ಮದ ಕುರಿತು ವಿಚಾರ ಮಂಡಿಸಲಿದ್ದಾರೆ. ಸುಮಾರು 4 ಸಾವಿರಕ್ಕೂ ಹೆಚ್ಚು ಹನುಮ ಭಕ್ತಾಧಿಗಳು ಒಂದೆಡೆ ಸೇರಿಸುವ ಚಿಂತನೆ ಇದ್ದು, ರಾಮಾಯಣದಲ್ಲಿ ಬಹುಮುಖ ಪಾತ್ರವಹಿಸುವ ಮೂಲಕ ರಾಮನ ಮೊದಲ ಭಕ್ತನಾಗಿ ಕಾಣಿಸಿಕೊಂಡು ಹಿಂದೂ ಧರ್ಮದ ಪ್ರತಿಪಾದಕನಾಗಿದ್ದ ಹನುಮಂತನ ಶಕ್ತಿ, ಸ್ಥೈರ್ಯಗಳನ್ನು ತಿಳಿಸುವ ಕಾರ್ಯ ಹನುಮ ಜಯಂತಿಯ ಮೂಲಕ ನಡೆಯಲಿದೆ ಎಂದರು. ಈ ಸಂದರ್ಭ ತಿತಿಮತಿ ಶ್ರೀರಾಮ ಸೇವಾ ಸಮಿತಿಯ ಕಾರ್ಯದರ್ಶಿ ಪಾಲೆಂಗಡ ಮನು, ಪದಾಧಿಕಾರಿಗಳಾದ ಎನ್.ಎನ್.ಅನುಪ್ ಕುಮಾರ್, ಸಿದ್ದರಾಜು ಮಣಿ, ಗೋವಿಂದ ಇದ್ದರು.