
ಮಡಿಕೇರಿ NEWS DESK ಡಿ.20 : ರೈತರ ಸಿ ಮತ್ತು ಡಿ ಜಮೀನನ್ನು ಮೀಸಲು ಅರಣ್ಯವನ್ನಾಗಿ ಪರಿವರ್ತಿಸುವ ಆದೇಶವನ್ನು ವಿರೋಧಿಸಿ, ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆಯೊಂದಿಗೆ ಸಹಸ್ರಾರು ಕೃಷಿಕರು ರೈತ ಹೋರಾಟ ಸಮಿತಿ ಮತ್ತು ಕೊಡಗು ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಜಾಥ ನಡೆಸಿದರು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅಸಮಾಧಾನ ವ್ಯಕ್ತಪಡಿಸಿದರು. ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಹಾಗೂ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಅವರುಗಳ ನೇತೃತ್ವದಲ್ಲಿ ಪಕ್ಷಾತೀತವಾದ ಬೃಹತ್ ಜಾಥ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಆರಂಭಗೊಂಡು ನಗರದ ಖಾಸಗಿ ಬಸ್ ನಿಲ್ದಾಣವನ್ನು ಹಾದು, ಗಾಂಧಿ ಮೈದಾನದವರೆಗೆ ಸಾಗಿತು. ನಗರ ಸಾವಿರಾರು ಪ್ರತಿಭಟನಾಕಾರರಿಂದಾಗಿ ಹಸಿರುಮಯವಾಯಿತು, ಅಲ್ಲದೆ ವಾಹನಗಳ ಸಂಚಾರ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತು. ಗಾಂಧಿ ಮೈದಾನದಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ರೈತರ ಪರ ಹೋರಾಟಗಾರ ಶೃಂಗೇರಿಯ ಸುಧೀರ್ ಕುಮಾರ್ ಮುರೋಳಿ ಸಿ ಮತ್ತು ಡಿ ಭೂಮಿಯ ಸಮಸ್ಯೆಯ ವಿರುದ್ಧ ಹೋರಾಟ ಕೇವಲ ಕೊಡಗು ಜಿಲ್ಲೆಗೆ ಸೀಮಿತವಾಗಬಾರದು. ಈ ಹೋರಾಟವನ್ನು ಮಲೆನಾಡು ಮತ್ತು ಕರಾವಳಿ ಭಾಗದ 36 ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತರಿಸಿದಾಗ ಮಾತ್ರ ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ಮಣಿಸಲು ಸಾಧ್ಯವೆಂದರು. ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಮೀಸಲು ಅರಣ್ಯವನ್ನಾಗಿ ಪರಿವರ್ತಿಸುವುದಕ್ಕೆ ವಿರುದ್ಧವಾಗಿ ಹೋರಾಟ ಸೀಮಿತವಾಗದಿರಲಿ. ಪ್ರಮುಖವಾಗಿ ಅರಣ್ಯ ಕಾಯ್ದೆಯ ಸೆಕ್ಷನ್ 4 ನ್ನು ಘೋಷಿಸುವ ಮೂಲಕ ಸಿ ಮತ್ತು ಡಿ ಭೂಮಿಯನ್ನು ಮೀಸಲು ಅರಣ್ಯವನ್ನಾಗಿ ಪರಿವರ್ತಿಸುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆ ಸೆಕ್ಷನ್ 4ನ್ನು ಹಿಂದಕ್ಕೆ ಪಡೆಯುವ ನಿಟ್ಟಿನಲ್ಲಿ ಹೋರಾಟವನ್ನು ಕೇಂದ್ರೀಕರಿಸಬೇಕೆಂದು ಅವರು ಕರೆ ನಿಡಿದರು. ರೈತ ಹೋರಾಟ ಸಮಿತಿಯ ಕಾನೂನು ಸಲಹೆಗಾರ ದೀಪಕ್ ಬಿ.ಜೆ. ಮಾತನಾಡಿ, ಸಿ ಮತ್ತು ಡಿ ಭೂಮಿಯನ್ನು ಅವೈಜ್ಞಾನಿಕವಾಗಿ ಗುರುತಿಸಲಾಗಿದೆ. ಇದನ್ನು ಅರಣ್ಯ ಮತ್ತು ಕಂದಾಯ ಇಲಾಖೆಗಳು ಜಂಟಿ ಸರ್ವೇ ನಡೆಸುವ ಮೂಲಕ ಪುನರ್ ಪರಶೀಲನೆ ನಡೆಸಬೇಕಾಗಿದೆ. ಸಮಸ್ಯೆ 1977 ರಿಂದ ಆರಂಭವಾಗಿದ್ದರು ಇಲ್ಲಿಯವರೆಗು ಸಮಸ್ಯೆ ಬೆಳೆದಿರುವುದು ಕೃಷಿಕರ ತಿಳುವಳಿಕೆಗೆ ಬರಲಿಲ್ಲವೆಂದು ತಿಳಿಸಿದರು. 1977ರಲ್ಲಿ ಅತ್ಯಂತ ಬೇಜವಾಬ್ದಾರಿಯಿಂದ ಕೃಷಿಗೆ ಯೋಗ್ಯವಲ್ಲದ ಸಿ ಮತ್ತು ಡಿ ಜಮೀನನ್ನು ಸಮರ್ಪಕವಾಗಿ ಗುರುತಿಸದೆ, ಅರಣ್ಯ ಇಲಾಖೆಗೆ ಕೇವಲ ಆಯಾ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್‌ಗಳ ಮೂಲಕ ಹಸ್ತಾಂತರಿಸಿರುವುದು ಸಮಸ್ಯೆಗೆ ಮೂಲವಾಗಿದೆ. ಈ ಬಗ್ಗೆ 1994 ರಲ್ಲಿ ಮತ್ತೊಮ್ಮೆ ಅವೈಜ್ಞಾನಿಕವಾಗಿ ಸಿ ಮತ್ತು ಡಿ ಭೂಮಿಯನ್ನು ಗುರುತಿಸುವ ಕಾರ್ಯ ನಡೆಯಿತೆಂದು ಬೇಸರ ವ್ಯಕ್ತಪಡಿಸಿದರು.
ನ್ಯಾಯಾಲಯವು ಅರಣ್ಯ ಕಾಯ್ದೆಯ ಸೆಕ್ಷನ್ 4 ಮೂಲಕ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಕೃಷಿಕ ಸಮೂಹ ಸಂಕಷ್ಟಕ್ಕೆ ಸಿಲುಕಿರುವುದಾಗಿ ತಿಳಿಸಿದರು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಈ ಎಲ್ಲಾ ಗೊಂದಲಗಳಿಗೆ ಅರಣ್ಯ ಇಲಾಖಾ ಅಧಿಕಾರಿಗಳ ಧೋರಣೆಯೆ ಕಾರಣವಾಗಿದೆ. ಅವರಿಗೆ ಈ ದೇಶದ ಕಾನೂನು ಅನ್ವಯವಾಗುವುದಿಲ್ಲ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಆದೇಶ ಮಾಡುವ ಈ ಅಧಿಕಾರಿಗಳು ಇಲ್ಲಸಲ್ಲದ ವಿಚಾರಗಳನ್ನು ಮುಂದುಮಾಡಿ ಜನರಿಗೆ ಕಿರುಕುಳವನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು. 1978ಕ್ಕೂ ಹಿಂದೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರನ್ನು ತೆರವು ಮಾಡಬಾರದು, 5 ಏಕರೆಯ ಒಳಗೆ ಮೀಸಲು ಅರಣ್ಯವಾಗಿದ್ದರು ಒತ್ತುವರಿಯಾಗಿದ್ದಲ್ಲಿ ಅದನ್ನು ತೆರವುಗೊಳಿಸಕೂಡದು ಎನ್ನುವ ಸ್ಪಷ್ಟ ಆದೇಶಗಳಿದ್ದರು, ಇದೀಗ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಮೀಸಲು ಅರಣ್ಯ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಕೃಷಿಕ ವಲಯ ಗಟ್ಟಿ ಧ್ವನಿ ಎತ್ತದಿದ್ದಲ್ಲಿ ಬದುಕು ಹಾಳಾದೀತು ಎಂದು ಎಚ್ಚರಿಕೆ ನೀಡಿದರು. ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಸಮಸ್ಯೆಯ ಕುರಿತು ಪಕ್ಷಾತೀತ ನೆಲೆಗಟ್ಟಿನ ಹೋರಾಟವನ್ನು ರೂಪಿಸುವ ಮೂಲಕ ಸರ್ಕಾರದ ಕಣ್ತೆರೆಸಬೇಕಾಗಿದೆ. ಪ್ರಸ್ತುತ ಅರಣ್ಯ ಸಚಿವರಾಗಿರುವ ಈಶ್ವರ ಖಂಡ್ರೆ ಅವರು ಒಬ್ಬ ಪರಿಸರವಾದಿಯಾಗಿದ್ದು, ಅವರು ಇಲ್ಲಿಯವರೆಗಿನ ತಮ್ಮ ಅಧಿಕಾರದ ಅವಧಿಯಲ್ಲಿ ಜನರ ಬದುಕಿಗೆ ತೊಡಕನ್ನುಂಟು ಮಾಡುವ ವನ್ಯ ಜೀವಿ ಉತ್ಪನ್ನಗಳನ್ನು ಮನೆಯಲ್ಲಿ ಇರಿಸಿಕೊಳ್ಳದಂತೆ, ಖಾಸಗಿ ಜಾಗಗಳಲ್ಲಿ ಇರುವ ಮರಗಳ ಸರ್ವೇ ನಡೆಸುವ ಹಾಗೂ ಸಿ ಮತ್ತು ಡಿ ಜಮೀನನ್ನು ಅರಣ್ಯಕ್ಕೆ ಹಸ್ತಾಂತರಿಸಬೇಕೆನ್ನುವ ಆದೇಶ ಹೊರಡಿಸಿದ್ದಾರೆ. ಯಾವುದೇ ಗ್ರಾಮದಲ್ಲಿ ಸಿ ಮತ್ತು ಡಿ ದರ್ಜೆಯ ಭೂಮಿಯ ಸರ್ವೇ ಕಾರ್ಯಕ್ಕೆ ಮುಂದಾದಲ್ಲಿ ಅವರನ್ನು ಹಿಂದಕ್ಕೆ ಕಳುಹಿಸುವಂತೆ ಕೃಷಿಕ ಸಮೂಹಕ್ಕೆ ಕರೆ ನಿಡಿದರು. ರೈತ ಹೋರಾಟದಲ್ಲಿ ಪಾಲ್ಗೊಂಡ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ ಅವರು ತಾವು ರೈತರ ಪರವಾಗಿದ್ದು, ಹೋರಾಟಕ್ಕೆ ಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು. ಬೃಹತ್ ಪ್ರತಿಭಟನಾ ಜಾಥ ಮತ್ತು ಸಭೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಎಂಎಲ್‌ಸಿಗಳಾದ ವೀಣಾ ಅಚ್ಚಯ್ಯ, ಎಸ್.ಜಿ.ಮೇದಪ್ಪ, ರೈತ ಹೋರಾಟ ಸಮಿತಿಯ ಸಂಚಾಲಕ ವಿ.ಕೆ.ಲೋಕೇಶ್ ಮತ್ತು ಅನಿಲ್ ಬಗ್ಗನ, ರೈತ ಸಂಘದ ಪ್ರಮುಖರಾದ ದಿನೇಶ್ ಕೆ.ಎಸ್., ಮಿಥುನ್ ಹರಗ, ದಿವಾಕರ ಕೂತಿ, ವಿವಿಧ ಪಕ್ಷಗಳ ಪ್ರಮುಖರಾದ ಕೆ.ಪಿ.ಚಂದ್ರಕಲಾ, ಅನಿತಾ ಪೂವಯ್ಯ, ಎಸ್.ಆರ್.ಭರತ್, ನಾಪಂಡ ಮುತ್ತಪ್ಪ, ಹರಪ್ಪಳ್ಳಿ ರವೀಂದ್ರ, ಪಶ್ಚಿಮ ಘಟ್ಟ ಮೂಲ ನಿವಾಸಿಗಳ ಸಂಘಟನೆಯ ಹೆಚ್.ಎನ್. ಶ್ರೀಧರ್, ರಾಷ್ಟ್ರೀಯ ಕಿಸಾನ್ ಮೋರ್ಚಾ ಪ್ರಮುಖರಾದ ಜಯರಾಂ, ಸೋಮವಾರಪೇಟೆ, ಭಾಗಮಂಡಲ ಮತ್ತು ಸಂಪಾಜೆಯ ರೈತ ಹೋರಾಟ ಹಿತರಕ್ಷಣಾ ಸಮಿತಿಯ ಪ್ರಮುಖರು ಪಾಲ್ಗೊಂಡಿದ್ದರು. ::: ಬೇಡಿಕೆಗಳು ::: ಅವೈಜ್ಞಾನಿಕವಾಗಿ ಮಾಡಿರುವ ಸಿ & ಡಿ ಸರ್ವೆಯನ್ನು ರದ್ದುಗೊಳಿಸಿ, ಮರು ಸರ್ವೆ ಮಾಡಿ ರೈತರ ವ್ಯವಸಾಯ ಮಾಡಿರುವ ಭೂಮಿಯನ್ನು ರೈತರ ಹೆಸರಿಗೆ ಮಂಜೂರು ಮಾಡಬೇಕು. ಯಾವುದೇ ಮಾಹಿತಿ ಇಲ್ಲದೆ ಮಾಡಿರುವ ಮೀಸಲು ಅರಣ್ಯ, ಸೆಕ್ಷನ್ 4/5 ಅನ್ನು ಕೈಬಿಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಸಿರು ನ್ಯಾಯಾಲಯಕ್ಕೆ ಒತ್ತಡ ಹಾಕಿ ಸ್ಥಳೀಯ ಜನರನ್ನು ಒಕ್ಕಲೆಬ್ಬಿಸುವುದನ್ನು ತಪ್ಪಿಸಬೇಕು. *ಅರಣ್ಯ ಹಾಗೂ ಕಂದಾಯ ಇಲಾಖೆಯವರು ವಾಸ್ತವತೆ ಅರಿಯದೆ ಮಾಡಿರುವ ಡೀಮ್ಸ್ ಫಾರೆಸ್ಟ್ ಕಾಯ್ದೆಯನ್ನು ರೈತರ ಹಿತದೃಷ್ಟಿಯಿಂದ ಕೈಬಿಡಬೇಕು. ಕಸ್ತೂರಿರಂಗನ್ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಿರಸ್ಕರಿಸಿ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗದ ಹಾಗೆ ಕೇರಳ ಮಾದರಿಯಂತೆ ಚಾರಿ ಮಾಡಬೇಕು. ಊರುಉಡುವೆ, ದೇವರಕಾಡು, ಗೋಮಾಳ ಇವುಗಳನ್ನು ನಮ್ಮ ಪೂರ್ವಿಕರು ಊರಿನ ಹಿತದೃಷ್ಠಿಯಿಂದ ಮೀಸಲು ಮಾಡಿರುವ ಭೂಮಿಯಾಗಿದ್ದು, ಅದನ್ನು ಅರಣ್ಯ ಇಲಾಖೆಯ ಅಧೀನಕ್ಕೆ ಒಳಪಡಿಸದೆ, ಮೊದಲಿನಂತೆ ಗ್ರಾಮದ ಅಧೀನಕ್ಕೆ ಒಳಪಡಿಸಬೇಕು. ಈ ಅವೈಜ್ಞಾನಿಕ ಅರಣ್ಯ ಕಾಯ್ದೆಯಿಂದ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ 50, 53, 57 ಅರ್ಜಿಗಳಿಗೆ ಅನುಗುಣವಾಗಿ ರೈತರಿಗೆ ಯಾವುದೇ ಅಡೆತಡೆಗಳಿಲ್ಲದೆ ಹಕ್ಕು ಪತ್ರ ವಿತರಿಸಬೇಕು. ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ದುರಸ್ಥಿ ಕಡತಗಳನ್ನು ಆದಷ್ಟು ಬೇಗ ದುರಸ್ಥಿ ಮಾಡಿಕೊಡಬೇಕು. ಬಡವರು ಕಟ್ಟಿರುವ ಮನೆಗಳಿಗೆ 94ಸಿ ಅನ್ನು ಮೊದಲಿನಂತೆ ದಾಖಲಾತಿ ವಿತರಿಸಬೇಕು. ರೈತರಿಗೆ 10 ಹೆಚ್. ಪಿ. ಪಂಪ್ ಸೆಟ್‌ಗೆ ಉಚಿತ ವಿದ್ಯುತ್ ನೀಡಬೇಕು. ಮಾನವ ಹಾಗೂ ವನ್ಯಜೀವಿಗಳ ಸಂಘರ್ಷದಲ್ಲಿ ನಮ್ಮ ಬದುಕುವ ಹಕ್ಕನ್ನು ಅರಣ್ಯ ಇಲಾಖೆಯ ಮೂಲಕ ಕಸಿದುಕೊಳ್ಳಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.












