ಮಡಿಕೇರಿ ಡಿ.23 NEWS DESK : ಹಸಿವಿನ ಬೆಲೆ ಹಸಿದವರಿಗೆ ಗೊತ್ತು, ಬಡತನ ಅನುಭವಿಸಿದವನಿಗೆ ಗೊತ್ತು, ಬಡತನದ ನೋವು ಅವಮಾನ ಅನುಭವಿಸಿದವನಿಗೆ ಗೊತ್ತು ಅದರ ನೋವು. ಇದು ಮೂರು ಒಂದಕ್ಕೊಂದು ಸಂಬಂಧಿಗಳು. ಇವುಗಳು ಒಂದಾನೊಂದು ಬಿಟ್ಟಿರೋದು ಕಷ್ಟ. ಈ ಲೇಖನದಲ್ಲಿ ಹಸಿವಿನ ಬೆಲೆ ಹಸಿದವರಿಗೆ ಹೇಗೆ ಗೊತ್ತು ಎಂಬ ಬಗ್ಗೆ ಒಂದು ಪೂರ್ವವಲೋಕನ. ಇಂದಿನ ಯುವ ಪೀಳಿಗೆಗೆ ಅದರ ಅನುಭವ ಕಡಿಮೆ. ಅದರಿಂದ ಅವರಿಗೆ ಅನ್ನದ ಬೆಲೆ ಗೊತ್ತಿಲ್ಲ. ಅದು ಇರಲಿ ಇತೀಚಿನ ದಿನಗಳಲ್ಲಿ ಮಕ್ಕಳಿಗೆ ಆಹಾರ ಧಾನ್ಯಗಳನ್ನು ಎಲ್ಲಿ, ಹೇಗೆ ಬೆಳೆಯುವುದು ಎಂಬುದು ಅವರಿಗೆ ಗೊತ್ತೇ ಇಲ್ಲ. ಅದು ಅವರ ತಪ್ಪಲ್ಲ. ಪ್ರಸ್ತುತ ಜೀವನ ಶೈಲಿ ಹಾಗೂ ಆಧುನಿಕ ಶಿಕ್ಷಣ ವ್ಯವಸ್ಥೆ ಈ ರೀತಿಯಲ್ಲಿ ಇದೆ. ಈ ಬರಹದಲ್ಲಿ ನಾನು ಕೇಳಿದ, ನೋಡಿದ ಹಾಗೂ ಭಾಗಶಃ ಅನುಭವಿಸಿದ ಹಸಿದವರ ಬಡತನ, ಅವಮಾನ, ಅನುಭವಿಸಿದವರ ನೋವು ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ. ಹಾಗೆ ಇಂದು ಸರ್ಕಾರದಿಂದ ಅನ್ನಭಾಗ್ಯ, ಮಕ್ಕಳಿಗೇ ಮಧ್ಯಾಹ್ನದ ಬಿಸಿಊಟ, ಇಂತಹ ಕಾರ್ಯಕ್ರಮಗಳ ಬಗ್ಗೆ ಟೀಕಿಸುವವರಿಗೆ ಹಸಿವಿನ ಬಗ್ಗೆ ಅರಿವು ಮೂಡಿಸುವ ಸಣ್ಣ ಪ್ರಯತ್ನ. ನನ್ನ ಅಜ್ಜನ ಕಾಲದಿಂದ ನನ್ನ ತಂದೆಯ ಕಾಲದ ಅನುಭವದ ಮಾತು ಕೇಳಿ ಹಾಗೂ ನನ್ನ ಜೀವನದಲ್ಲಿ ಆದ ಅನುಭವದ ಪ್ರಕಾರ ಟೀಕಿಸಿದವರು ಹಸಿವನ್ನು ಅನುಭವಿಸಿಲ್ಲ. ಹಿಂದೆ ಜನಸಂಖ್ಯೆ ಕಡಿಮೆ ಇದ್ದರೂ ಹೆಚ್ಚಾಗಿ ಕಿತ್ತು ತಿನ್ನುವ ಬಡತನವಿತ್ತು. ಅಂದು ಕೃಷಿಯನ್ನು ಅವಲಂಬಿಸಿದ್ದರು. ಮನೆ ತುಂಬಾ ಮಕ್ಕಳು ಬರುವ ಕೃಷಿ ಉತ್ಪನ್ನ ಜೀವನ ಸಾಗಿಸಲು ಸಾಕಾಗುತ್ತಿರಲಿಲ್ಲ. ಅಂದು ಸಮಾಜದಲ್ಲಿ ಮೂರು ವರ್ಗವಿತ್ತು. ಒಂದು ಶ್ರೀಮಂತ, ಇನ್ನೊಂದು ಮಧ್ಯಮ, ಇನ್ನೊಂದು ಕಡು ಬಡವರು. ಇದರಲ್ಲಿ ಮೊದಲ ವರ್ಗ ಬಿಟ್ಟರೆ ಮಿಕ್ಕ ಮಧ್ಯಮ ವರ್ಗ ಅರೆ ಹೊಟ್ಟೆಯಲ್ಲಿ ಜೀವನ ಸಾಗಿಸುತಿದ್ದರೆ, ಕಡು ಬಡವರು ಯಾರಾದರೂ ಅನ್ನ ಕೊಟ್ಟರೆ ಇಲ್ಲ ಕೂಲಿ ಮಾಡಿ ಬಂದ ಹಣದಲ್ಲಿ ಜೀವನ ಸಾಗಿಸಬೇಕಿತ್ತು. ಈ ವರ್ಗಕ್ಕೆ ಉಪವಾಸ ಜೀವನದ ಅವಿಭಾಜ್ಯ ಅಂಗವಾಗಿತ್ತು. ನಾನು ಬಿಟ್ಟಿ ಭಾಗ್ಯದ ವಿರೋದಿ. ಆದರೆ ಕೆಲವರ್ಷದ ಹಿಂದೆ ರೇಡಿಯೋದಲ್ಲಿ ಕಾರ್ಯಕ್ರಮವೊಂದನ್ನು ಕೇಳಿ ಮನ ಕಲಕಿತು. ಮೈಸೂರಿನಲ್ಲಿ ಓರ್ವ ವಿದ್ಯಾರ್ಥಿಗೆ ತಂದೆ ತಾಯಿ ಇಬ್ಬರು ಇರಲಿಲ್ಲ. ಶಾಲೆ ಒಂದರಲ್ಲಿ ಓದುತಿದ್ದ ಅವನಿಗೆ ಶಾಲೆಯಲ್ಲಿ ನೀಡುತ್ತಿದ್ದ ಮಧ್ಯಾಹ್ನದ ಊಟ ಮಾತ್ರ. ಶಾಲೆಗೆ ರಜೆ ಇದ್ರೆ ಹೊಟ್ಟೆಗೇ ತಣ್ಣೀರು ಗತಿ ಇಂತಹ ವ್ಯವಸ್ಥೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ನಿಧನರಾದ ಸಮಯದಲ್ಲಿ ವಾಟ್ಸಪ್‍ನಲ್ಲಿ ಬಂದ ಒಂದು ಸಂದೇಶ ನನ್ನ ಮನ ತಟ್ಟಿತು. ಆ ಸಂದೇಶವೆಂದರೆ ದಿನ ಶಾಲೆಗೆ ಹೊರಡುವಾಗ ಪುಸ್ತಕದ ಚೀಲದ ಜೊತೆಗೆ ಅಮ್ಮ ಕಟ್ಟಿ ಕೊಟ್ಟ ಊಟದ ಬುತ್ತಿ ಇರುತಿತ್ತು. ಕೆಲವೊಮ್ಮೆ ಅನ್ನ ಹಳಿಸಿರುತಿತ್ತು. ಸಂಜೆ ಮನೆಗೆ ಬರುವವರೆಗೂ ಹಸಿವೂಢಲ ಸಂಕಟ ಅಷ್ಟಿಷ್ಟಲ್ಲ. ಮನೆಯಲ್ಲೂ ಇರುತಿರಲಿಲ್ಲ ಅನ್ನ. ಕಾಯಬೇಕಿತ್ತು ರಾತ್ರಿವರೆಗೂ. ಅದನ್ನು ಅನುಭವಿಸಿದವನಿಗೆ ಗೊತ್ತು ಆ ಸಂಕಟ. ಅಂತ ಸಮಾಜದಲ್ಲಿ ನಾವು ಇದ್ದೇವೆ ಅಂದರೆ ಉತ್ಪ್ರೇಕ್ಷೆ ಅಲ್ಲ. ಸಾಧಾರಣ ಮೈಸೂರು ಬೆಂಗಳೂರು ಕಡೆ ವಾರನ್ನ ಎಂಬ ವ್ಯವಸ್ಥೆ ಇತ್ತು. ಕೆಲವು ಮನೆಯವರು ಓದುವ ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಟ ದಿನ ಒಂದು ಹೊತ್ತು ಊಟ ಹಾಕುತಿದ್ದರು. ಹಾಗೆ ಒಂದೊಂದು ದಿನ ಒಂದೊಂದು ಮನೆಯಲ್ಲಿ ಊಟ ಮಾಡಿ ವಿದ್ಯಾಭ್ಯಾಸ ಮುಗಿಸಿದವರು ಅನೇಕರಿದ್ದಾರೆ. ಹಾಗೆ ಇನೊಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡು ಓದಿದವರಿದ್ದಾರೆ. ಹಿಂದೆ ಮನೆಯಲ್ಲಿ ಮಾಂಸ ಸಾರು ಕಾಣಬೇಕೆಂದರೆ ಮನೆಗೆ ನೆಂಟರು ಬರಬೇಕು. ಆಗ ಮನೆಯಲ್ಲಿ ಕೋಳಿ ಕೊಯ್ದು ನೆಂಟರಿಗೆ ಒಳ್ಳೆ ತುಂಡು ಹಾಕಿ ಉಳಿದ ರೆಕ್ಕೆ ಪುಕ್ಕ ಮನೆಯವರಿಗೆ. ಇಲ್ಲ ಊರಿನಲ್ಲಿ ಯಾರಾದ್ರೂ ಹಂದಿ-ಕುರಿ ಕಡಿದರೆ ಮಾಂಸ ಮನೆಗೆ ತರುತಿದ್ದರು. ಮಲೆನಾಡ ಜಿಲ್ಲೆಗಳಲ್ಲಿ ಬೇಟೆಯಾಡಿ ಹೊಳೆ ಕೆರೆಯಲ್ಲಿ ಮೀನು ಹಿಡಿದರೆ ಮನೆಯಲ್ಲಿ ಮಾಂಸಸಾರು. ನಮ್ಮ ಹಿರಿಯಯರು ಕಾಡಿನಲ್ಲಿ ಸಿಗುತ್ತಾ ಇದ್ದ ಗೆಡ್ಡೆ ಗೆಣಸು, ಕಾಡು ಹಣ್ಣುಗಳನ್ನು ಉದಾಹರಣೆಗೇ ಮಳೆಗಾಲದಲ್ಲಿ ಹಲಸಿನಹಣ್ಣು ಹೀಗೆ ಆ ಋತುವಿನಲ್ಲಿ ಸಿಗುವ ಹಣ್ಣು ತಿಂದು ಬದುಕು ನಡೆಸಿದವರೇ ಹೆಚ್ಚು. ಮನೆ ತುಂಬಾ ಮಕ್ಕಳು. ಅಕ್ಕಿ ಮುಗಿದರೆ ಬೇರೆಯವರ ಮನೆಯಿಂದ ಪೋಲಿಗೆ (ಪೋಲಿ ಅಂದರೆ ಬಡ್ಡಿ) ಭತ್ತ ಅಥವಾ ಆಗಿನ ಕಾಲದಲ್ಲಿ ಇದ್ದ ಧವಸ ಭಂಡಾರದಲ್ಲಿ ಪೋಲಿಗೆ ಭತ್ತ ಕೊಡುವ ವ್ಯವಸ್ಥೆ ಇತ್ತು. ಅಲ್ಲಿಂದ ಭತ್ತ ಸಾಲವಾಗಿ ತಂದು ಮುಂದೆ ಬೆಳೆ ಬಂದಾಗ ಅದನ್ನು ವಾಪಸ್ ಕೊಡಬೇಕಿತ್ತು. ಧವಸ ಭಂಡಾರವೆಂದರೆ ಧಾನ್ಯದ ಬ್ಯಾಂಕ್. ಇನ್ನು ನಗರ. ಆಗಿನ ನಗರವೆಂದರೆ ಈಗಿನ ಹಳ್ಳಿ. ಅಲ್ಲಿ ಕೂಲಿ ಮಾಡಿ ಸಂಜೆ ಹಣ ಸಿಕ್ಕಿದರೆ ಊಟ ಇಲ್ಲ ತಣ್ಣೀರು ಗತಿ. ಇದು ಮಲೆನಾಡ ಚಿತ್ರಣ. ಇನ್ನು ಬಯಲು ಸೀಮೆ ಚಿತ್ರಣ ಇನ್ನು ಕಷ್ಟಕರ. ಮಲೆನಾಡ ಕಡೆ ಪ್ರಕೃತಿಯಲ್ಲಿ ಏನಾದ್ರು ತಿನ್ನಲು ಸಿಗುತಿತ್ತು. ಆದರೆ ಬಯಲು ಸೀಮೆ ಚಿತ್ರಣವೇ ಬೇರೆ. ಅಲ್ಲಿ ಕಿತ್ತು ತಿನ್ನುವ ಬಡತನ, ಬರಗಾಲ. ಅವರ ಬದುಕು ದುಸ್ಥರ. ಅಲ್ಲಿ ಊರಿಂದ ಊರೇ ಗುಳೆ ಹೋಗುವಂತ ಪರಿಸ್ಥಿತಿ. ಹಿಂದೆ ಶಾಲೆಗಳಲ್ಲಿ ಉಪ್ಪಿಟ್ಟು ನೀಡುವ ಕಾರ್ಯಕ್ರಮ, ಸೊಸೈಟಿಯಲ್ಲಿ ಅಕ್ಕಿ, ಸೀರೆ, ಪಂಚೆ, ಶರ್ಟ್ ಬಟ್ಟೆಗಳು ನೀಡುತಿದ್ದರು. ಬಡತನದಲ್ಲಿ ಹಸಿವನ್ನು ಸಹಿಸಿಕೊಳ್ಳಬಹುದು ಆದರೆ ಅವಮಾನವನ್ನಲ್ಲ. ಅದನ್ನು ಅನುಭವಿಸಿದವನೇ ಅದನ್ನ ಮೆಟ್ಟಿ ನಿಂತವನು ಜೀವನದಲ್ಲಿ ದಡ ಮುಟ್ಟುತ್ತಾನೆ. ಅಂದು ಮೈಮುಚ್ಚೋಕೆ ಬಟ್ಟೆಗೆ ಗತಿ ಇರ್ಲಿಲ್ಲ. ಇಂದು ಗತಿ ಇದ್ರೂ ಮೈಮುಚ್ಚೋಕೆ ಮನಸಿಲ್ಲ. ಅಂದು ಹೊಟ್ಟೆ ತುಂಬಿಸಲು ತಟ್ಟೆಯಲ್ಲಿ ಅನ್ನವಿರಲಿಲ್ಲ. ಇಂದು ತಟ್ಟೆಯಲ್ಲಿ ಅನ್ನವಿದ್ದರೂ ಹೊಟ್ಟೆಯಲ್ಲಿ ಜಾಗವಿಲ್ಲ. ಮಾನವಿದ್ದರೆ ತಾನೇ ಅವಮಾನ, ಅಂದು ಹರಿದ ಬಟ್ಟೆ ಹೊಲಿದು ಹಾಕುತಿದ್ದರು, ಇಂದು ಬಟ್ಟೆ ಹರಿದು ಹಾಕುತ್ತಾರೆ. ಇಂದು ತಟ್ಟೆಯಲ್ಲಿ ಇರುವ ಅನ್ನವನ್ನು ಬಿಸಾಕಲು ಹಿಂದೆ ಮುಂದೆ ನೋಡುವುದಿಲ್ಲ. ಹಿಂದೆ ಒಂದು ಕಾಲವಿತ್ತು ಬಿಸಾಕಿದ ಅನ್ನವನ್ನು ಹೆಕ್ಕಿ ತಿನ್ನುವ ಕಾಲ. ಅಂದು ಓದಲು ಮೈಲುಗಟ್ಟಲೆ ನಡೆಯಬೇಕಿತ್ತು. ಇಂದು ಮನೆ ಬಾಗಿಲಿಗೆ ಬರುತ್ತದೆ ವಾಹನ. ಅಂದು ಅರೆ ಹೊಟ್ಟೆಯಲ್ಲಿ ಇಷ್ಟ ಪಟ್ಟು ಓದುತಿದ್ದರು ಇಂದು ತುಂಬಿದ ಹೊಟ್ಟೆಯಲ್ಲಿ ಕಷ್ಟ ಪಟ್ಟು ಓದಿಸ ಬೇಕು. ಅಂದು ಹಸಿದ ಹೊಟ್ಟೆ ಜೀವನದ ಮೌಲ್ಯಗಳನ್ನು ಕಲಿಸುತಿತ್ತು. ಅದಕ್ಕೆ ಉದಾಹರಣೆ ಜೀವನದಲ್ಲಿ ಸಾಧನೆ ಮಾಡಿದವರ ಬದುಕಿನ ಬಗ್ಗೆ ಅರಿಯಬೇಕು.
ಕೊನೆಯ ಮಾತು :: “ಸಮಾಜದಲ್ಲಿ ಬಹಳಸ್ಟು ಬದಲಾವಣೆ ಆಗಿದೆ ನಾಗರೀಕತೆ, ತಂತ್ರಜ್ಜಾನ ಬೆಳೆದಿದ್ದು ವಿಜ್ಞಾನ ಸಮಾಜದಲ್ಲಿ ಸಾಕಷ್ಟು ಅವಿಸ್ಮಯಕಾರ ಉಂಟು ಮಾಡಿದರು. ಪ್ರಪಂಚದಲ್ಲಿ ಇನ್ನು ಪೂರ್ತಿಯಾಗಿ ಹಸಿವು ನೀಗಿಲ್ಲ ಒಂದೇಡೆ ಅದ್ದೂರಿ ಹೆಸರಲ್ಲಿ ಆಹಾರವನ್ನು ಪೋಲು ಮಾಡುವವರು, ಇನೊಂದೆಡೆ ಅದೇ ಆಹಾರಕ್ಕಾಗಿ ಚಾಚುವ ಕೈಗಳು ಕಡಿಮೆಯಾಗಿಲ್ಲ ಎಂಬುದನ್ನು ಅರಿಯದೆ ಇದ್ದರೆ ಮುಂದಿನ ದಿನಗಳು ಕಠಿಣ ಎಂಬುದನ್ನು ಅರಿಯಬೇಕು ಅಂದು ಮನೆ ತುಂಬಾ ಮಕ್ಕಳಿದ್ದರು ಇರಲಿಲ್ಲ ಉಣ್ಣಲು ತಟ್ಟೆ ತುಂಬಾ ಅನ್ನ, ಇಂದು ಇದೆ ತಟ್ಟೆ ತುಂಬಾ ಅನ್ನ ಆದರೆ ಉಣ್ಣಲು ಇಲ್ಲ ಮನೆ ತುಂಬಾ ಮಕ್ಕಳು.
ಲೇಖನ : ಬಾಳೆಯಡ ಕಿಶನ್ ಪೂವಯ್ಯ,
ಲೇಖಕರು ಮತ್ಹು ವಕೀಲರು
ಮಡಿಕೇರಿ ಫೋನ್- 94488995554