ಸೋಮವಾರಪೇಟೆ ಡಿ.31 NEWS DESK : ಕಸ್ತೂರಿ ರಂಗನ್ ವರದಿ ಅನುಷ್ಠಾನವಾದರೆ ಕೊಡಗಿನ ರೈತರಿಗೆ ಉಳಿಗಾಲವಿಲ್ಲ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಆತಂಕ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನವನ್ನು ರಾಜ್ಯ ಸರ್ಕಾರ ತಿರಸ್ಕರಿಸಿದ್ದು, ರಾಜ್ಯದ ನಿರ್ಧಾರವನ್ನು ಕೇಂದ್ರ ಸರ್ಕಾರ ಪುರಸ್ಕರಿಸಬೇಕು ಎಂದು ಮನವಿ ಮಾಡಿದರು. ಕಸ್ತೂರಿ ರಂಗನ್ ವರದಿಯಂತೆ ಕೊಡಗಿನಲ್ಲಿರುವ ಪಶ್ಚಿಮಘಟ್ಟ ಸುತ್ತಮುತ್ತಲ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯ ಎಂದು ಗುರುತಿಸಿದರೆ, ಕೊಡಗಿನ ಬಹುತೇಕ ಗ್ರಾಮಗಳು ವಲಯಕ್ಕೆ ಸೇರ್ಪಡೆಗೊಂಡು ಗ್ರಾಮೀಣ ಜನರು ಬೀದಿಪಾಲಾಗಬೇಕಾಗುತ್ತದೆ. ಪುಷ್ಪಗಿರಿ ತಪ್ಪಲಿನ ಸನಿಹವೆ ಗ್ರಾಮಗಳಿದ್ದು, ಸಿ ಆ್ಯಂಡ್ ಡಿ ಕೃಷಿ ಭೂಮಿಯಲ್ಲೆ ಬದುಕು ಕಟ್ಟಿಕೊಂಡಿದ್ದಾರೆ. ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡರೆ ಸಿ ಆ್ಯಂಡ್ ಡಿ ಭೂಮಿ ಸೂಕ್ಷ್ಮ ಪರಿಸರ ವಲಯಕ್ಕೆ ಸೇರ್ಪಡೆಯಾಗುತ್ತದೆ. ನಂತರ ರೈತರು ಗುಳೆ ಹೋಗಬೇಕಾದ ಅನಿವಾರ್ಯ ಒದಗುತ್ತದೆ ಎಂದು ಹೇಳಿದರು. ಈಗಾಗಲೇ ಸಿ ಆ್ಯಂಡ್ ಡಿ ಭೂಮಿಯನ್ನು ಅರಣ್ಯಕ್ಕೆ ಸೇರಿಸಲು ಪ್ರಕ್ರಿಯೆಗಳು ಪ್ರಾರಂಭವಾಗಿವೆ. ಈ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಜಾಗೃತಿ ಮೂಡಿಸಲಾಗಿದೆ. ರೈತರು ಹೋರಾಟದ ಮೂಲಕ ಭೂಮಿ ಉಳಿಸಿಕೊಳ್ಳವ ತೀರ್ಮಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಹೋರಾತ್ರಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಿ ಆ್ಯಂಡ್ ಡಿ ಯ ಭೂಮಿಯ ಬಗ್ಗೆ ಪೂರ್ಣ ಮಾಹಿತಿ ಕಲೆಹಾಕಲು ಕಂದಾಯ ಸಚಿವರು ಉನ್ನತಮಟ್ಟದ ಸಮಿತಿ ರಚಿಸುವ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಭರವಸೆ ನೀಡಿದ್ದಾರೆ. ಸಮಿತಿಯಲ್ಲಿ ಕೊಡಗಿನ ಶಾಸಕರುಗಳು ಹಾಗು ರೈತ ಮುಖಂಡರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಹಾಗು ಕೂಡಲೆ ಸಮಿತಿ ಕಾರ್ಯಾರಂಭ ಮಾಡಬೇಕು. ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಸಿ ಆ್ಯಂಡ್ ಡಿ ಭೂಮಿಯ ಜಂಟಿ ಸರ್ವೆ ಮಾಡಬೇಕು ಎಂದು ಒತ್ತಾಯಿಸಿದರು. ಹೋರಾಟ ಸಮಿತಿ ಸಂಚಾಲಕರಾದ ಕೆ.ಎಂ.ಲೋಕೇಶ್ ಮಾತನಾಡಿ, ಸಿ ಆ್ಯಂಡ್ ಡಿ ಭೂಮಿ ಹಾಗು ರೈತರ ಸಮಸ್ಯೆಯ ಬಗ್ಗೆ ಕ್ಷೇತ್ರದ ಸಂಸದರು ಮತ್ತು ಉಸ್ತುವಾರಿ ಸಚಿವರು ತಿಳಿದುಕೊಳ್ಳಬೇಕು. ರೈತರ ಸಮಸ್ಯೆಯನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟಿಸಬೇಕಾದದು ಸಂಸದರ ಕರ್ತವ್ಯವಾಗಿದೆ. ಕೂಡಲೆ ಉಸ್ತುವಾರಿ ಸಚಿವರು, ಸಂಸದರ ನೇತೃತ್ವದಲ್ಲಿ ಕೊಡಗಿನಲ್ಲಿ ರೈತ ಮುಖಂಡರ ಸಭೆಯನ್ನು ಕರೆಯಬೇಕು. ಸ್ಥಳೀಯ ಶಾಸಕರುಗಳು ಸಿ ಆ್ಯಂಡ್ ಡಿ ಭೂಮಿ ಸಮಸ್ಯೆ, ಸೆಕ್ಷನ್ 4 ಸರ್ವೆಯ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡುತ್ತಾರೆ ಎಂದು ಹೇಳಿದರು. ಕೊಡಗಿನ ರೈತರ ಭೂಮಿಯನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬುದು ಈಗ ಕೊಡಗಿನ ರೈತರಿಗೆ ಅರಿವಾಗುತ್ತಿದೆ. ಭೂಮಿಯನ್ನು ಕಳೆದುಕೊಂಡು ರೈತರು ಗುಳೆ ಹೋಗುವುದಕ್ಕೆ ಸಾಧ್ಯವೇ ಇಲ್ಲ. ಕೊಡಗಿನ ಮೂಲನಿವಾಸಿಗಳಿಗೆ ಸರ್ಕಾರಗಳು ತೊಂದರೆ ನೀಡಿದರೆ, ಮತ್ತೊಮ್ಮೆ ಕೊಡಗು ರಾಜ್ಯದ ಹೋರಾಟಕ್ಕೆ ಕೊಡಗಿನ ರೈತರು ಕರೆಕೊಡುವ ಸಂರ್ಭವೂ ಒದಗಬಹುದು ಎಂದು ಹೇಳಿದರು. ಸಮಿತಿ ಸಂಚಾಲಕ ಬಿ.ಜೆ.ದೀಪಕ್ ಮಾತನಾಡಿ, ಸರ್ಕಾರದ ಆದೇಶದಂತೆ ಸರ್ಕಾರಿ ಜಮೀನಿನಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಜಮೀನುಗಳನ್ನು ಗುತ್ತಿಗೆ ನೀಡುವ ಸಂಬಂಧ ಅರ್ಜಿಗಳನ್ನು ನೀಡಲು ಕಾಲಾವಕಾಶವನ್ನು ಮುಂದಿನ 3 ತಿಂಗಳಿಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದರು. ಡಿ.31 ಕೊನೆ ದಿನವಾಗಿತ್ತು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ರೈತರು ಅರ್ಜಿ ಸಲ್ಲಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೃಷಿ ಬೆಳೆಗಳ ಕಟಾವು ನಡೆಯುತ್ತಿದ್ದು, ಬಹುತೇಕ ರೈತರಿಗೆ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕರಾದ ಎಚ್.ಕೆ.ಪೃಥ್ವಿ, ದೇವರಾಜ್ ಇದ್ದರು.