ಶ್ರೀ ಕಾಂತೇಶ್ವರ ದೇವಸ್ಠಾನ, ಕಾಂತಾವರ
ಶಿಲ್ಪ ಕಲೆಗಳ ಬೀಡಾದ ಕರ್ನಾಟಕವು ಅನೇಕ ಪುಣ್ಯ ಕ್ಷೇತ್ರಗಳಿಗೆ ಸಾಕ್ಷಿಯಾಗಿದೆ. ಅಂತಹವುಗಳಲ್ಲಿ ಕರಾವಳಿಯ ಪಶ್ಚಿಮ ಘಟ್ಟದ ತಪ್ಪಲ್ಲಿನಲ್ಲಿರುವ ಶಿವನ ದೇಗುಲವಾದ ಕಾಂತಾವರದ ಕಾಂತೇಶ್ವರ ದೇವಾಲಯವೂ ಒಂದಾಗಿದೆ. ಕಾಂತೇಶ್ವರ ದೇವಸ್ಥಾನವು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದಲ್ಲಿದೆ. ಇದು ಉಡುಪಿಯಿಂದ ೪೦ ಕಿ.ಮೀ ದೂರದಲ್ಲಿದೆ. ಇದು ಪಡುಬಿದ್ರಿಯಿಂದ ಕಾರ್ಕಳಕ್ಕೆ ಹೋಗುವ ರಸ್ತೆಯಲ್ಲಿನ ಬೆಳವಾಯಿಯಿಂದ ಸ್ವಲ್ಪವೇ ದೂರದಲ್ಲಿದೆ.
ಇತಿಹಾಸ :: ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಈ ದೇವಸ್ಥಾನ 7ನೇ ಶತಮಾನಕ್ಕೆ ಸೇರಿದ್ದು ಎನ್ನಲಾಗುತ್ತದೆ. ಇಲ್ಲಿನ ಮೂಲದೈವ ಕಾಂತೇಶ್ವರ. ಇಲ್ಲಿ ಗಣೇಶ, ಅಣ್ಣಪ್ಪ ಹಾಗೂ ಅರ್ಧನಾರೀಶ್ವರ ಗುಡಿಯೂ ಇದೆ. ಕಾಂತಾರ ಎಂದರೆ ಅರಣ್ಯ. ಈ ಕ್ಷೇತ್ರವು ಹಿಂದೆ ಅರಣ್ಯದಿಂದ ಕೂಡಿತ್ತು ಈ ಕಾರಣದಿಂದಾಗಿ ಈ ಊರಿಗೆ ಕಾಂತವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ಹಾಗೆಯೇ ಜಂಜವಾತ ಎನ್ನುವ ಅಸುರನ ಕುಟುಂಬ ಇಲ್ಲಿ ನೆಲೆಸಿದ್ದರಂತೆ. ಅವರ ಕುಟುಂಬ ಇಲ್ಲಿ ತಪಸ್ಸು ಮಾಡುತ್ತಿದ್ದ ಮುನಿಗಳಿಗೆ ಕಾಟ ನೀಡುತ್ತಿದ್ದರಂತೆ. ಅವರಲ್ಲಿ ಅಂಬರೀಶ ಎಂಬ ಮುನಿ ಇಲ್ಲಿನ ರಾಕ್ಷಸರ ಸಂತಾನವನ್ನು ನಾಶ ಮಾಡಬೇಕೆಂಬ ಕಾರಣದಿಂದಾಗಿ ಶಿವನನ್ನು ತಪಸ್ಸು ಮಾಡುತ್ತಾನಂತೆ. ಅಂಬರೀಶ ಮುನಿಯು ಮಾಡಿದ ತಪಸ್ಸಿನ ಫಲವಾಗಿ ಶಿವನು ಒಲಿದು ಈ ಗ್ರಾಮದಲ್ಲಿ ನೆಲೆನಿಂತ ಎಂಬ ನಂಬಿಕೆಯಿದೆ. ಹಾಗೆಯೇ ಅಂಬರೀಶ ಮುನಿಗೆ ಪಾರ್ವತಿ ದೇವಿಯು ತನ್ನ ಕೈಯ ಕಡಗವನ್ನು ಲಿಂಗಕ್ಕೆ ತೊಡಸಿ ಪೂಜೆ ಮಾಡಬೀಕೆಂದಳು. ಅಲ್ಲದೇ ಪೂಜೆ ಮುಗಿಸಿ ಆಶ್ರಮಕ್ಕೆ ತೆರಳುವಾಗ ಕಡಗವನ್ನು ತೆಗೆದುಕೊಂಡು ಹೋಗಲು ಹೇಳಿ ಅದೃಶ್ಯರಾದರು. ಎಂದಿನಂತೆ ಮುನಿ ಲಿಂಗಕ್ಕೆ ತೊಡಸಿದ್ದ ಕಡಗವನ್ನು ತೆಗೆಯಲು ಪ್ರಯತ್ನಿಸಿದಾಗ ತೆಗೆಯುವ ಪ್ರಯತ್ನದಲ್ಲಿ ವಿಫಲನಾಗಿ ದುಃಖದಿಂದಿರುವಾಗ ಕಡಗ ತೆಗೆಯುವ ಪ್ರಯತ್ನ ಬೇಡ ನಾವಿಬ್ಬರೂ ಲಿಂಗದಲ್ಲಿ ಐಕ್ಯವಾಗಿರುವೆವು ಎಂಬ ಅಶರೀರವಾಣಿ ಅವನಿಗೆ ಕೇಳಿತಂತೆ. ಹಾಗೆಯೇ ಇಲ್ಲಿ ಶಿವನು ಪಾರ್ವತಿ ಸಮೇತನಾಗಿ ನೆಲೆಸಿರುವುದರಿಂದ ಕಾಂತಿಯ ಜೊತೆ ಈಶ್ವರನೆಂದು ಇಲ್ಲಿಗೆ ಕಾಂತೇಶ್ವರ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ. ಈ ಲಿಂಗವೇ ಮುಂದೆ ಬೆಳ್ಳಿ,ತಾಮ್ರ ಮತ್ತು ಚಿನ್ನದ ಬಣ್ಣಗಳನ್ನು ತಾಳುವ ಶಿವಲಿಂಗವಾಯಿತು. ಆ ಕಡಗವನ್ನು ಇಂದಿಗೂ ಇಲ್ಲಿ ಕಾಣಬಹುದು.ಕಾಂತೇಶ್ವರನ ಸನ್ನಿಧಾನದಿಂದ ಮೂರು ಕಿ.ಮೀ ದೂರ ಸಾಗಿದರೆ ಅಂಬರೀಶ ಮುನಿ ತಪಸ್ಸು ಮಾಡಿದ ಗುಹೆ ಇದೆ.
ವಿಶೇಷತೆ:: ಈ ದೇವಸ್ಥಾನದಲ್ಲಿ ಇಲ್ಲಿನ ಪ್ರಮುಖ ದೇವರಾದ ಶಿವನ ಉದ್ಭವ ಲಿಂಗವು ದಿನಕ್ಕೆ ಮೂರು ಬಾರಿ ಅಂದರೆ ಬೆಳಗ್ಗೆ ಮಧ್ಯಾಹ್ನ ಮತ್ತು ಸಂಜೆ ಮೂರು ರೀತಿಯಲ್ಲಿ ಬಣ್ಣ ಬದಲಾಯಿಸುತ್ತದೆ.ಶಿವಲಿಂಗವು ಬೆಳಗ್ಗೆ ಬೆಳ್ಳಿಯ ಬಣ್ಣದಲ್ಲಿ ಕಾಣಿಸಿಕೊಂಡರೆ ಮಧ್ಯಾಹ್ನ ತಾಮ್ರದ ಬಣ್ಣದಲ್ಲಿ ಮತ್ತು ಸಂಜೆಯ ಹೊತ್ತಿನಲ್ಲಿ ಚಿನ್ನದ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಲಿಂಗವನ್ನು ಕೆಲವರು ಲೋಹ ಎಂದೂ ಭಾವಿಸಬಹುದು ಆದರೆ ಇದು ಯಾವುದೇ ರೀತಿಯಾದ ಲೋಹವಲ್ಲ ಹಾಗೆಯೇ ಇದಕ್ಕೆ ಯಾವುದೇ ಕವಚಗಳನ್ನು ಹಾಕಲಾಗಿಲ್ಲ ಬದಲಾಗಿ ಉದ್ಭವ ಲಿಂಗವಾಗಿದ್ದು ವಜ್ರಶಿಲೆಯಾಗಿದೆ. ಇಲ್ಲಿನ ನಂದಿಯೂ ಬಹಳ ದೊಡ್ಡದಾಗಿದೆ.
ವಾಸ್ತುಶಿಲ್ಪ :: ಈ ದೇವಾಲಯದ ಸಂಕೀರ್ಣವೂ ಅತ್ಯಂತ ಹಳೆದಾಗಿದೆ ಮತ್ತು ಇಲ್ಲಿನ ವಾಸ್ತುಶಿಲ್ಪವು ಕೇರಳದ ಶೈಲಿಯಂತೆ ಕಾಣಿಸಿಕೊಳ್ಳುತ್ತದೆ.