ಮಡಿಕೇರಿ ಜ.3 NEWS DESK : ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್ ಅಭಿಪ್ರಾಯಟ್ಟರು. ನಾಪೋಕ್ಲು ಬಳಿಯ ಹೊದವಾಡ ಗ್ರಾಮದ ರಾಫೆಲ್ಸ್ ಇಂಟರ್ನ್ಯಾಷನಲ್ ಇಂಗ್ಲಿಷ್ ಸ್ಕೂಲ್ ಮತ್ತು ಪಿ.ಯು ಕಾಲೇಜು ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿರು. ಜೀವನದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಮಾರ್ಗದರ್ಶಕರಾಗಿಸಿ, ಇಂದಿನ ವಿದ್ಯಾರ್ಥಿಗಳು ಹಲವು ವಿಷಯವನ್ನು ಕಲಿಯಬೇಕಾಗಿದೆ. ಮೊಬೈಲ್ ನಲ್ಲಿ ರೀಲ್ಸ್ ನೋಡಿ ಸಮಯ ವ್ಯರ್ಥ ಮಾಡದೆ ಉತ್ತಮ ರೀತಿಯಲ್ಲಿ ಸಮಯನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಎಂಬುವುದನ್ನು ವಿದ್ಯಾರ್ಥಿಗಳು ಮನದಟ್ಟು ಮಾಡಿಕೊಳ್ಳಬೇಕು ಎಂದರು. ಸ್ವಾಮಿ ವಿವೇಕಾನಂದರಿಗಿದ್ದ ಏಕಾಗ್ರತೆ ಇದ್ದರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ಮಾದಕ ದ್ರವ್ಯಗಳಿಗೆ ಬಲಿಯಾಗದೆ, ಹೇಗೆ ಜೀವನದಲ್ಲಿ ಗುರಿ ಸಾಧಿಸಬಹುದು ಎಂಬುವುದರ ಬಗ್ಗೆ ಯುವ ಸಮೂಹ ಚಿಂತಿಸಬೇಕಾಗಿದೆ. ತೋರ್ಪಡಿಸುವಿಕೆಯ ಜೀವನ ನಿಲ್ಲಿಸಿ ಸ್ವಪ್ರಯತ್ನದಿಂದ ಹೇಗೆ ಜೀವನದಲ್ಲಿ ಮುಂದೆ ಬರಬಹುದೆಂದು ಯೋಚಿಸಬೇಕೆಂದು ಅವರು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತರು ಮತ್ತು ಹೆಸರಾಂತ ಉಮ್ಮತ್ತಾಟ್ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ತಮ್ಮಲ್ಲಿನ ಕಲಾಸಕ್ತಿಯನ್ನು ಪೋಷಿಸಿ ಬೆಳೆಸಬೇಕಾಗಿದೆ. ಜೀವನದಲ್ಲಿ ಸಿಗುವ ಒಂದೊಂದು ಅವಕಾಶವನ್ನು ಬಳಸಿಕೊಂಡು ಮುಂದೆ ಬರಲು ಪ್ರಯತ್ನಿಸಬೇಕು. ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಏಳಿಗೆ ಸಾಧ್ಯ. ಒಂದು ಕ್ಷಣದಲ್ಲಿ ಯಾವುದೇ ಸಾಧನೆ ಅಸಾಧ್ಯ ಎಂದರು. ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ತನ್ವೀರ್ ಶಾಲೆ ಮತ್ತು ಕಾಲೇಜಿನ ವರದಿ ವಾಚಿಸಿದರು.
ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಕೊಡಗು ಜಿಲ್ಲಾ ಉಪಾಧ್ಯಕ್ಷ ಎನ್.ಕೆ.ಮೆಹಬೂಬ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೊದ್ದೂರು ಗ್ರಾ.ಪಂ ಸದಸ್ಯ ಕೆ.ಎಂ.ಮೊಯ್ದು, ಕೊಡಗು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ದಮಯಂತಿ ಹಾಗೂ ಶಾಲಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಐ.ಜೆ.ಸಮೀರಾ ಕಾರ್ಯಕ್ರಮದಲ್ಲಿ ಇದ್ದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸಲ್ಮಾನ್ ಫಾರಿಸ್ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿ ಹೈಸ್ ವಂದಿಸಿದರು. ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ವಿವಿಧ ಕಾರ್ಯಕ್ರಮಗಳಿಗೆ ಹಾಗೂ ಪೋಷಕರ ದಿನಾಚರಣೆಯ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪೋಷಕರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.