ಶನಿವಾರಸಂತೆ ಜ.6 NEWS DESK : ಹನ್ನೆರಡನೇ ಶತಮಾನದ ಬಸವಾದಿ ಶರಣರ ಆದರ್ಶಗಳನ್ನು ತಮ್ಮಲ್ಲಿ ಮೈಗೂಡಿಸಿಕೊಂಡು ವಚನ ಸಾಹಿತ್ಯದ ಪ್ರೇರಕರಾಗಿ ನುಡಿದಂತೆ ನಡೆದಂತಹ ಸಂತ ಶ್ರೇಷ್ಠರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಸ್ಮರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಜಿಸಿ ಮಾತನಾಡಿದ ಅವರು ಮನುಷ್ಯನ ಮೌಲ್ಯಯುತ ಬದುಕಿಗೆ ಬೇಕಾದ ನೀತಿಯನ್ನು ಸಾರಿದ ಮಹಾಚೈತನ್ಯ ಸಿದ್ದೇಶ್ವರ ಸ್ವಾಮೀಜಿ. ಅವರ ವಿಚಾರಧಾರೆಗಳು ಸಾರ್ವಕಾಲಿಕವಾಗಿದ್ದು, ಜೀವನವೇ ಒಂದು ಸಂದೇಶವಾಗಿದೆ ಎಂದು ಹೇಳಿದರು.
ಜ್ಞಾನಯೋಗಿಗಳ ವಿಚಾರಧಾರೆಗಳು ಮನುಷ್ಯನ ಅಂತರಂಗವನ್ನು ಶ್ರೀಮಂತಗೊಳಿಸುತ್ತವೆ. ದಯೆಯೇ ಧರ್ಮದ ಮೂಲ, ಇವನಾರವ ಎನ್ನದೇ ಇವ ನಮ್ಮವ ಎಂಬ ಶರಣರ ಸರಳತೆ ಯನ್ನು ಯುವ ಜನಾಂಗ ಅರಿಯಬೇಕಿದೆ ಎಂದು ಸದಾಶಿವ ಸ್ವಾಮೀಜಿ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್ ಮಾತನಾಡಿ, ಬಸವಾದಿ ಶರಣರ ಆದರ್ಶಗಳು ಹಾಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅನುಸರಿಸಿದ ಸಮಾನತೆ ಹಾಗೂ ಜ್ಞಾನದ ಅರಿವನ್ನು ಇಂದಿನ ವಿದ್ಯಾರ್ಥಿಗಳು ಅರಿಯುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಕರೆಕೊಟ್ಟರು. ಮಾನವತಾವಾದಿ ಅಂಬೇಡ್ಕರ್ ದೇಶಕ್ಕೆ ಸಂವಿಧಾನ ಕೊಟ್ಟರೆ, ಕ್ರಾಂತಿಕಾರಿ ಬಸವೇಶ್ವರರು ಕಲಬೇಡ – ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನದ ಮೂಲಕ ಮನುಷ್ಯನ ಜೀವನಕ್ಕೆ ಸುಂದರ ಸಂವಿಧಾನ ಕೊಟ್ಟಿದ್ದಾರೆ. ಆದ್ದರಿಂದ ಯಾರೂ ಕೂಡ ಯಾರ ಬಗ್ಗೆಯೂ ಕೋಪ, ತಾಪ, ಅಸೂಯೆಗಳನ್ನು ಹೊಂದದೇ ಪರಸ್ಪರ ಎಲ್ಲರನ್ನೂ ಗೌರವಿಸುವ ಹಾಗೂ ಆದರಿಸುವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ
ಇಂದಿನ ಯುವ ಜನಾಂಗ ಶರಣರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕೆಂದರು. ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ.ಎಂ. ಹೇಮಂತ್ ಮಾತನಾಡಿ, ಹನ್ನೆರಡನೇ ಬಸವಾದಿ ಶರಣರ ಬಳಿಕ 21ನೇ ಶತಮಾನದ ನಡೆದಾಡುವ ದೇವರೇ ಆಗಿದ್ದಂತಹ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಂತಹ ಪ್ರಾಥಸ್ಮರಣೀಯರಿಂದಾಗಿ ಈ ನಾಡು ಧನ್ಯವಾಗಿದೆ. ಸರಳತೆಯ ಪ್ರತೀಕವಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಮಾಜ ಅಥವಾ ಸರ್ಕಾರದಿಂದ ಏನನ್ನೂ ಬಯಸದೇ ಪ್ರವಚನಗಳ ಮೂಲಕ ನಾಡಿನ ಜನತೆಗೆ ಜ್ಞಾನದ ದೀವಿಗೆ ಹಚ್ಚಿ ಮರೆಯಾಗಿರುವ ಮಹಾದೈವ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು. ಸಾಹಿತಿ ಕಣಿವೆ ಭಾರಧ್ವಜ್ ಆನಂದತೀರ್ಥ, ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಶಾಲಾ ಶಿಕ್ಷಕರಾದ ಶಿವಕುಮಾರ್, ಕಾಂತ, ಕೆ.ಜಿ.ಕಲ್ಪನಾ, ಕೀರ್ತಿ, ದಿವಾಕರ್ ಇದ್ದರು. ವಿದ್ಯಾರ್ಥಿನಿ ಧನ್ಯಶ್ರೀ ವಚನಗಾಯನ ಮಾಡಿದರು.