ಮಡಿಕೇರಿ ಜ.22 NEWS DESK : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ವನ್ಯಜೀವಿಗಳ ಉಪಟಳ ಮಿತಿ ಮೀರಿದೆ. ಮುಂದಿನ ದಿನಗಳಲ್ಲಿ ಜೀವಹಾನಿ ಸಂಭವಿಸಿದರೆ ಅದಕ್ಕೆ ಅರಣ್ಯ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಎಚ್ಚರಿಕೆ ನೀಡಿದ್ದಾರೆ. ಕಾಡಾನೆಗಳ ಹಿಂಡು ಮರಿಯಾನೆಗಳೊಂದಿಗೆ ಕಾಫಿ ತೋಟಗಳಲ್ಲೇ ಬೀಡು ಬಿಟ್ಟಿದ್ದು, ಬೆಳೆಗಾರರು ಹಾಗೂ ಕಾರ್ಮಿಕರು ಆತಂಕಗೊಂಡಿದ್ದಾರೆ. ಇದು ಕಾಫಿ ಕೊಯ್ಲಿನ ಸಮಯವಾಗಿದ್ದು, ಕಾಡಾನೆಗಳ ದಾಳಿಯ ಆತಂಕದಲ್ಲಿ ಕಾರ್ಮಿಕರು ತೋಟಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ, ಇದರಿಂದ ಬೆಳೆಗಾರರಿಗೆ ನಷ್ಟವಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಿತ್ಯ ಜೀವಭಯದಿಂದಲೇ ಓಡಾಡುತ್ತಿದ್ದಾರೆ. ಗ್ರಾಮಸ್ಥರ ಕಣ್ಣೊರೆಸಲು ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಳ್ಳುತ್ತದೆ. ಆದರೆ ತಿತಿಮತಿ ಮತ್ತು ಪೊನ್ನಂಪೇಟೆ ವಿಭಾಗದ ಅರಣ್ಯ ಸಿಬ್ಬಂದಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸದೆ ಇರುವುದರಿಂದ ಕಾಡಾನೆಗಳು ಕಾಡಿಗೆ ಮರಳದೆ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸ್ಥಳಾಂತರಗೊಳ್ಳುತ್ತಿವೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡೂ ವಿಭಾಗಗಳ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಜಂಟಿ ಕಾರ್ಯಾಚರಣೆಯ ಮೂಲಕ ಕಾಡಾನೆಗಳನ್ನು ಅಭಯಾರಣ್ಯಕ್ಕೆ ಓಡಿಸುವ ಕಾರ್ಯವನ್ನು ತ್ವರಿತವಾಗಿ ಮಾಡಬೇಕು. ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಆನೆಗಳ ಸಂತತಿ ತೋಟಗಳಲ್ಲಿಯೇ ಮಿತಿ ಮೀರಿ ಮತ್ತಷ್ಟು ಆತಂಕವನ್ನು ಸೃಷ್ಟಿಸಬಹುದು ಎಂದು ಗಮನ ಸೆಳೆದಿದ್ದಾರೆ. ನೆಲ್ಲಿಹುದಿಕೇರಿಯ ಅತ್ತಿಮಂಗಲದಲ್ಲಿ ಕ್ಯಾಂಟೀನ್ ಮತ್ತು ಕಾರಿನ ಮೇಲೆ ಹಾಡಹಗಲೇ ಕಾಡಾನೆ ದಾಳಿ ಮಾಡಿದೆ. ಪೊನ್ನಂಪೇಟೆ ಸಮೀಪ ಕೋಣನಕಟ್ಟೆ ಭಾಗದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಇಂದು ನಸುಕಿನ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಅವರ ನಿವಾಸಕ್ಕೆ ಲಗ್ಗೆ ಇಟ್ಟು ಹಾನಿ ಮಾಡಿದೆ. ಕೆಲವು ದಿನಗಳ ಹಿಂದೆ ಬಾಳೆಲೆಯಲ್ಲಿ ವನ್ಯ ಜೀವಿದಾಳಿ ಮಾಡಿದೆ. ಗಾಯಾಳುವಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ ಆರೋಗ್ಯ ಕೇಂದ್ರದಲ್ಲಿ ಪ್ರತಿಭಟನೆಯೂ ನಡೆದಿತ್ತು. ವಿರಾಜಪೇಟೆಯಿಂದ ಮೈಸೂರಿಗೆ ಪ್ರಯಾಣ ಬೆಳೆಸಿದ್ದ ಕಾರಿನ ಮೇಲೆ ತಿತಿಮತಿಯ ಮಜ್ಜಿಗೆ ಹಳ್ಳದ ಬಳಿ ಕಾಡಾನೆ ದಾಳಿ ಮಾಡಿ ಕಾರನ್ನು ನಜ್ಜುಗುಜ್ಜುಗೊಳಿಸಿತ್ತು. ಕಾರಿನಲ್ಲಿದ್ದ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಘಟನೆಗಳು ಕೆಲವೇ ದಿನಗಳ ಅಂತರದಲ್ಲಿ ನಡೆದಿದ್ದು, ಆತಂಕ ಹೆಚ್ಚಾಗಿದೆ. ವಾಹನ ಸವಾರರು ನಿರ್ಭಯವಾಗಿ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಮಡಿಕೇರಿಯಲ್ಲಿರುವ ಹಿರಿಯ ಅರಣ್ಯ ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಯಿಂದ ಹೊರ ಬಂದು ವನ್ಯಜೀವಿಗಳ ದಾಳಿಯಿಂದ ಗ್ರಾಮಸ್ಥರು ಅನುಭವಿಸುತ್ತಿರುವ ಕಷ್ಟನಷ್ಟಗಳನ್ನು ಪರಿಶೀಲಿಸಿ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಅರಣ್ಯ ಅಧಿಕಾರಿಗಳ ವಿಶೇಷ ಸಭೆ ನಡೆಸಿ ತುರ್ತು ಕ್ರಮಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕಾಡಾನೆ ದಾಳಿ ನಡೆಸಿ ಜೀವಹಾನಿ ಮಾಡಿದಾಗಲೆಲ್ಲ ಸರಕಾರದ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿ ಕಣ್ಣೊರೆಸುವ ತಂತ್ರವನ್ನಷ್ಟೇ ಮಾಡುತ್ತಿದ್ದಾರೆ. ವನ್ಯಜೀವಿಯಿಂದ ಆಗುತ್ತಿರುವ ತೊಂದರೆಗಳ ಕುರಿತು ಅಧ್ಯಯನ ನಡೆಸುತ್ತಿಲ್ಲ ಮತ್ತು ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸುತ್ತಿಲ್ಲ. ಶಾಸಕರುಗಳು ಕೂಡ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಣಿಸಿಲ್ಲವೆಂದು ರಾಕೇಶ್ ದೇವಯ್ಯ ಆರೋಪಿಸಿದ್ದಾರೆ.
::: ಹುಲಿ, ಚಿರತೆ ಆತಂಕ ::: ಕಿರುಗೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಹುಲಿ ಮತ್ತು ಚಿರತೆಗಳು ಕೂಡ ಆತಂಕವನ್ನು ಸೃಷ್ಟಿಸಿದ್ದು, ಇವುಗಳ ಸಂಚರಿಸುತ್ತಿರುವ ದೃಶ್ಯ ಈಗಾಗಲೇ ಸೆರೆಯಾಗಿದೆ. ಹುಲಿ, ಚಿರತೆಗಳಿಂದ ಹಸುಗಳು ಬಲಿಯಾಗುತ್ತಿವೆ. ಅಕ್ಕಪಕ್ಕದ ಗ್ರಾಮಗಳಲ್ಲಿ ವನ್ಯಜೀವಿಗಳಿಂದ ಜೀವಭಯವಿದ್ದರೂ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಕೆಲವು ದಿನಗಳಿಂದ ಕಿರುಗೂರು ಭಾಗದಲ್ಲಿ ಹುಲಿಯೊಂದು ಸಂಚರಿಸುತ್ತಿದೆ, ಆದರೆ ಇದು ಹುಲಿಯೇ ಅಥವಾ ಚಿರತೆಯೇ ಎನ್ನುವ ಬಗ್ಗೆ ಅರಣ್ಯ ಇಲಾಖೆಗೇ ಖಾತ್ರಿಯಾಗಿಲ್ಲ. ಕೊಡಗು ಹೊರತು ಪಡಿಸಿದಂತೆ ಇತರ ಜಿಲ್ಲೆಗಳಲ್ಲಿ ದಾಳಿ ಮಾಡುವ ಕಾಡುಪ್ರಾಣಿಗಳನ್ನು ಜನರ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತದೆ. ಆದರೆ ಕೊಡಗಿನಲ್ಲಿ ಮಾತ್ರ ವನ್ಯಜೀವಿಗಳ ಉಪಟಳವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.