ಕಣಿವೆ ಜ.6 NEWS DESK : ಕಾವೇರಿ ಹಾಗೂ ಹಾರಂಗಿ ನದಿಗಳ ಸಂಗಮ ಕ್ಷೇತ್ರ ಕೂಡಿಗೆಯ ಉದ್ಭವ ಸುಬ್ರಮಣ್ಯ ದೇವಾಲಯದಲ್ಲಿ ಕಿರುಷಷ್ಠಿ ಹಾಗೂ ಸತ್ಯನಾರಾಯಣ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಸ್ಥಳೀಯ ಸತ್ಯನಾರಾಯಣ ವೃತಾಚರಣ ಸಮಿತಿ ಸಹಯೋಗದಲ್ಲಿ ನಡೆದ ಪೂಜೋತ್ಸವದಲ್ಲಿ ನೂರಾರು ಮಂದಿ ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾದರು. ಹಾಗೆಯೇ ಕೂಡಿಗೆ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಮಂದಿ ಭಕ್ತಾಧಿಗಳು ದೇವಾಲಯಕ್ಕೆ ಬಂದು ಅಲಂಕೃತ ಉದ್ಭವ ಸುಬ್ರಮಣ್ಯ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ದೇಗುಲದ ಪ್ರಧಾನ ಅರ್ಚಕ ನವೀನ್ ಭಟ್ ನೇತೃತ್ವದಲ್ಲಿ ಪೂಜಾವಿಧಿಗಳು ನೆರವೇರಿತು. ಇದೇ ಸಂದರ್ಭ ನೆರೆದ ಭಕ್ತಾಧಿಗಳಿಗೆ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ ಹಾಗೂ ಸತ್ಯನಾರಾಯಣ ಪ್ರಸಾದ ನೀಡಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಸೋಮಯ್ಯ, ಕಾರ್ಯದರ್ಶಿ ಶಮಂತ ರೈ, ಉಪಕಾರ್ಯದರ್ಶಿ ಮಂದಣ್ಣ, ಶ್ರೀಸತ್ಯನಾರಾಯಣ ವೃತಾಚರಣ ಸಮಿತಿ ಅಧ್ಯಕ್ಷ ಡಿ.ಕೆ.ಪೊನ್ನಪ್ಪ, ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಪದಾಧಿಕಾರಿಗಳಿದ್ದರು.