ಸೋಮವಾರಪೇಟೆ ಜ.7 NEWS DESK : ಯಡೂರು ಗ್ರಾಮದ ಬಿ.ಟಿ.ಚೆನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಸಭೆ ನಡೆಯಿತು. ಸಮಿತಿ ಅಧ್ಯಕ್ಷ ಶಾಸಕ ಡಾ.ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಲೇಜಿನ ಶೈಕ್ಷಣಿಕ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಾಯಿತು. ಕಾಲೇಜು ತರಗತಿಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದು, ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಕಾಲೇಜಿನಲ್ಲಿ ನಿರಂತರವಾಗಿ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೇ ಸಂದರ್ಭ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಲು ಶಾಸಕರಿಗೆ ಮನವಿ ಮಾಡಿದರು. ಶಾಸಕರು ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ವಿದ್ಯಾರ್ಥಿಗಳು ಡ್ರಗ್ಸ್, ಧೂಮಪಾನ ಮದ್ಯಪಾನಗಳಂತಹ ವ್ಯಸನಗಳ ಕಡೆ ವಾಲುವುದಕ್ಕೆ ಅವಕಾಶ ಮಾಡಿಕೊಡಬಾರದು. ವಿದ್ಯಾರ್ಥಿ ಹಾಜರಾತಿ ಕಡೆ ಸೂಕ್ತ ಗಮನ ನೀಡಬೇಕು. ಆಗಾಗ್ಗೆ ಪೋಷಕರ ಸಭೆ ಕರೆದು ವಿದ್ಯಾರ್ಥಿಗಳ ಪ್ರಗತಿ, ಕಲಿಕೆಯ ಬಗ್ಗೆ ಮುಕ್ತವಾಗಿ ಚರ್ಚಿಸಬೇಕು ಎಂದು ಉಪನ್ಯಾಸಕರಿಗೆ ತಿಳಿಸಿದರು. ಅಭಿವೃದ್ಧಿ ಸಮಿತಿಯ ಸದಸ್ಯರು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು. ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಡಿ.ಹರ್ಷ, ಕನ್ನಡ ವಿಭಾಗದ ಮುಖ್ಯಸ್ಥ ಹುಚ್ಚೇಗೌಡ, ಸಮಿತಿ ಸದಸ್ಯರಾದ ಮಿಲ್‍ಡ್ರೆಡ್ ಗೊನ್ಸಾಲ್ವೆಸ್, ಉಲ್ಲಾಸ್, ವೀರಭದ್ರಪ್ಪ, ದಳವಾಯಿ ರಾಜು, ಪ್ರದೀಪ್, ದಿಲೀಪ್, ಹರ್ಷ, ಸುರೇಂದ್ರ, ಅಬ್ದುಲ್ ರಜಾಕ್, ಸುಜಿತ್,ಮರ್ವಿನ್ ಡಿಸೋಜ, ಸುಶೀಲ ಹಾನಗಲ್ಲು ಇದ್ದರು.