ಮಡಿಕೇರಿ NEWS DESK ಜ.8 : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕೊಡಗು ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ 5 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕುಶಾಲನಗರ ಸಮೀಪ ಕೊಪ್ಪದಲ್ಲಿ ನಡೆದ ಎಸ್‌ಡಿಪಿಐ ಸಭೆಯಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಕಾರ್ಯದರ್ಶಿಗಳಾದ ಅಕ್ರಮ್ ಮೌಲಾನ, ಅಪ್ಸರ್ ಕೆ.ಆರ್ ನಗರ ಹಾಗೂ ಖಜಾಂಚಿ ಅಕ್ರಂ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಕುರಿತು ಚರ್ಚಿಸಲಾಯಿತು. ನಂತರ ಸರ್ವಾನುಮತದಿಂದ 5 ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಕೊಡಗಿನಲ್ಲಿ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಆನೆ ಮಾನವ ಸಂಘರ್ಷ ನಡೆಯುತ್ತಿದ್ದು, ಅನೇಕ ಕಾರ್ಮಿಕರು ಹಾಗೂ ಬೆಳೆಗಾರರು ಜೀವ ಕಳೆದುಕೊಂಡಿದ್ದಾರೆ. ಅರಣ್ಯ ಇಲಾಖೆ ಸಣ್ಣ ಪರಿಹಾರದ ಮೊತ್ತ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜೀವಗಳು ಬಲಿಯಾಗುವ ಸಾಧ್ಯತೆ ಇದೆ. ಅರಣ್ಯ ಇಲಾಖೆ ಹಾಗೂ ಸರಕಾರ ತಕ್ಷಣ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಮಾತ್ರವಲ್ಲ ಜಿಲ್ಲೆಯ ಶಾಸಕರು ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸರಕಾರದ ಗಮನ ಸೆಳೆಯಬೇಕು. ಮಳೆಗಾಲದಲ್ಲಿ ಪ್ರವಾಹ ಉಂಟಾಗಲು ಜಿಲ್ಲೆಯಲ್ಲಿ ಹರಿಯುವ ನದಿಗಳಲ್ಲಿ ಹೂಳು ತುಂಬಿರುವುದೇ ಕಾರಣವಾಗಿದೆ. ಎಲ್ಲಾ ನದಿಗಳಲ್ಲಿನ ಹೂಳುಗಳನ್ನು ತೆರೆವುಗೊಳಿಸಿ ಮಳೆ ನೀರನ್ನು ಸರಾಗವಾಗಿ ಹರಿಯುವಂತೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.
ಕೊಡಗಿನ ನಗರ ಪ್ರದೇಶ ಹಾಗೂ ಗ್ರಾಮಗಳಲ್ಲಿ ಸಾವಿರಾರು ವಸತಿ ರಹಿತ ಬಡ ಕುಟುಂಬಗಳು ಜೀವನ ಮಾಡುತ್ತಿದ್ದು, ಎಲ್ಲಾ ವಸತಿ ಹಾಗೂ ನಿವೇಶನ ರಹಿತರಿಗೆ ಭೂಮಿ ಮತ್ತು ವಸತಿ ಹಕ್ಕುಗಳನ್ನು ನೀಡಬೇಕು. ಸಿ ಮತ್ತು ಡಿ ಭೂಮಿಯನ್ನು ಅರಣ್ಯ ಇಲಾಖೆಯಿಂದ ವಶಪಡಿಸಿಕೊಂಡು ಶೀಘ್ರ ಭೂ ರಹಿತರಿಗೆ ಹಂಚಬೇಕೆಂದು. ಕೊಡಗಿನ ಎಲ್ಲಾ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಸರಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಲು ಸಭೆ ನಿರ್ಣಯ ಕೈಗೊಂಡಿತು. ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಪಕ್ಷವನ್ನು ಬಲಪಡಿಸುವ ಕುರಿತು ಸಲಹೆಗಳನ್ನು ನೀಡಿದರು. ನಿರ್ಗಮಿತ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕಾರ್ ಅವರು ಧ್ವಜಾರೋಹಣ ನೆರವೇರಿಸಿ ಸಭೆಯ ಅಧ್ಯಕ್ಷತೆ ವಹಿಸಿದರು. ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ವರದಿ ಮಂಡಿಸಿದರು.