ಮಡಿಕೇರಿ ಜ.10 NEWS DESK : ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಜ.15 ರಂದು ಕಾವೇರಿ ಕ್ಷೇತ್ರವಾದ ಭಾಗಮಂಡಲದ ಟ್ರಸ್ಟ್ನ ಜಾಗದಲ್ಲಿ 12ನೇ ವರ್ಷದ ‘ಚಂಡಿಕಾ ಹೋಮ’ವನ್ನು ಒಳಗೊಂಡಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 7 ಗಂಟೆಯಿಂದ ಶ್ರೀ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, ಶತರುದ್ರ ಪಠಣ ಹಾಗೂ ಚಂಡಿಕಾ ಹೋಮ ನಡೆಯಲಿದೆ. ಜಿಲ್ಲೆಯ ಕೊಡವ ಮತ್ತು ಅಮ್ಮಕೊಡವ ಜನಾಂಗ ಬಾಂಧವರು ಒಂದಾಗಿ ಸೇರಿ ಟ್ರಸ್ಟ್ನ ಸಹಯೋಗದಲ್ಲಿ ಚಂಡಿಕಾ ಹೋಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು. ಈ ಹಿಂದೆ ಅಷ್ಟಮಂಗಲ ಪ್ರಶ್ನೆಯ ಸಂದರ್ಭ ಕಂಡು ಬಂದ ದೋಷಗಳ ನಿವಾರಣೆಗಾಗಿ ನಿರಂತರವಾಗಿ ಚಂಡಿಕಾ ಯಾಗವನ್ನು ನಡೆಸಿಕೊಂಡು ಬರಲಾಗುತ್ತಿದೆ. ಧಾರ್ಮಿಕ ಕಾರ್ಯ ಮುಂದೆಯೂ ನಡೆಸಿಕೊಂಡು ಹೊಗಬೇಕೆಂದು ಇದ್ದಲ್ಲಿ ಅದಕ್ಕೂ ಟ್ರಸ್ಟ್ ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದರು.
ಟ್ರಸ್ಟ್ ಕಟ್ಟಡ ನಿರ್ಮಾಣಕ್ಕೆ ಕೋಟಿ ಅನುದಾನ :: ಭಾಗಮಂಡಲದಲ್ಲಿ ಟ್ರಸ್ಟ್ ಹೊಂದಿರುವ 50 ಸೆಂಟ್ ಜಾಗದಲ್ಲಿ 4.50 ಸೆಂಟ್ ಜಾಗದಲ್ಲಿ ಟ್ರಸ್ಟ್ ಕಟ್ಟಡ ನಿರ್ಮಾಣಕ್ಕೆ ಒಂದೂವರೆ ವರ್ಷದ ಹಿಂದೆಯೇ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಎಂಎಲ್ಸಿ ಸುಜಾ ಕುಶಾಲಪ್ಪ ಅವರ ಸಹಕಾರ ಮತ್ತು ಪ್ರಯತ್ನಗಳಿಂದ 1 ಕೋಟಿ ಅನುದಾನ ಲಭ್ಯವಾಗಿದೆ. ಇದರ ಸಹಕಾರದೊಂದಿಗೆ ಕಟ್ಟಡ ನಿರ್ಮಾಣ ಮಾಡಲಾಗುತ್ತದೆಂದು ಮಾಹಿತಿಯನ್ನಿತ್ತರು. ಟ್ರಸ್ಟ್ನ ಖಜಾಂಚಿ ತೋಲಂಡ ಸೋಮಯ್ಯ ಮಾತನಾಡಿ, ಉದ್ದೇಶಿತ ಕಟ್ಟಡದಲ್ಲಿ ಟ್ರಸ್ಟ್ನ ಕಚೇರಿ, ಸಭಾಂಗಣ ಸೇರಿದಂತೆ ಕ್ಷೇತ್ರಕ್ಕೆ ಭೇಟಿ ನಿಡುವ ಭಕ್ತಾದಿಗಳಿಗೆ ಅಗತ್ಯವಾದ ಕೆಲ ಸೌಲಭ್ಯಗಳನ್ನು ಒದಗಿಸಲು ಉದ್ದೇಶಿಸಲಾಗಿದೆಯೆಂದು ವಿವರಗಳನ್ನಿತ್ತರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಟ್ರಸ್ಟಿಗಳಾದ ನಾಯಕಂಡ ಅಯ್ಯಣ್ಣ, ನೆರೆಯಂಡಮ್ಮಂಡ ಪ್ರಭು, ಹಂಚೆಟ್ಟಿರ ಮನು ಮುತ್ತಪ್ಪ ಮತ್ತು ಕುಕ್ಕೇರ ಶ್ಯಾಮಲ ಉಪಸ್ಥಿತರಿದ್ದರು.