
ಮಡಿಕೇರಿ ಜ.11 NEWS DESK : ಕೊಡಗು ಜಿಲ್ಲೆಯಲ್ಲಿ ಆದಿವಾಸಿಗಳ ಮೇಲೆ ನಡೆದಿರುವ ಎಲ್ಲಾ ದೌರ್ಜನ್ಯದ ಪ್ರಕರಣಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳ ಸಮಕ್ಷಮದಲ್ಲಿ ವಿಶೇಷ ಅದಾಲತ್ ನಡೆಸಬೇಕೆಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ.ಎಸ್.ವೈ.ಗುರುಶಾಂತ್, ಜಿಲ್ಲೆಯಲ್ಲಿ ಆದಿವಾಸಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಬಲಿಷ್ಠರ ಒತ್ತಡಗಳಿಗೆ ಮಣಿಯದೆ ನಿಷ್ಠುರ, ನಿಷ್ಪಕ್ಷಪಾತದಿಂದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಆದಿವಾಸಿಗಳು ಹಾಗೂ ದುರ್ಬಲ ವರ್ಗಗಳ ಕೆಲಸಗಾರರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಕೋವಿ ತೋರಿಸಿ ಬೆದರಿಸುವ, ನಾಯಿ ಬಿಟ್ಟು ಕಚ್ಚಿಸುವ, ಸಾಲದ ನೆಪಹೇಳಿ ಜೀತದಾಳುಗಳನ್ನಾಗಿ ದಂಡಿಸಿ ದುಡಿಸುವ ಪ್ರಕರಣಗಳು ನಡೆಯುತ್ತಲೇ ಇದೆ. ಈ ರೀತಿಯ ದೌರ್ಜನ್ಯ ಪ್ರಕರಣಗಳನ್ನು ತಡೆಯುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅನೇಕ ಪ್ರಕರಣಗಳಲ್ಲಿ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ನಿಲ್ಲದೆ ಬಲಾಢ್ಯ ಆರೋಪಿಗಳನ್ನು ರಕ್ಷಿಸುವ ಪ್ರಯತ್ನಗಳು ನಡೆದಿದೆ. ಬಹುತೇಕ ಆದಿವಾಸಿ ಸಮುದಾಯಗಳ ಕುಟುಂಬಗಳಿಗೆ ವಸತಿ, ನಿವೇಶನ, ಪಡಿತರ ಚೀಟಿ, ಮತದಾರರ ಚೀಟಿ, ಆಧಾರ್ ಕಾರ್ಡ್, ಕುಡಿಯುವ ನೀರು, ಶೌಚಾಲಯ, ರಸ್ತೆ, ಬೀದಿ ದೀಪ ಸೇರಿದಂತೆ ಕನಿಷ್ಠ ಸೌಲಭ್ಯವೂ ಇಲ್ಲದಾಗಿದೆ. ಆದಿವಾಸಿಗಳಿಗೆ ಸೇರಿದ ಭೂಮಿಯನ್ನು ಇತರರು ಒತ್ತುವರಿ ಮಾಡಿಕೊಂಡಿದ್ದಾರೆ. ದೂರು ನೀಡಿದರೂ ನೊಂದವರ ನೆರವಿಗೆ ಯಾರೂ ಬರುತ್ತಿಲ್ಲ, ಯಾವುದೇ ಪರಿಹಾರ ದೊರೆಯುತ್ತಿಲ್ಲ. ಅರಣ್ಯ ಹಕ್ಕು ಕಾಯ್ದೆಯಡಿ ಸಿಗಬೇಕಾದ ಭೂಮಿ ಮತ್ತು ಅರಣ್ಯದ ಮೇಲಿನ ಸಮುದಾಯ ಹಕ್ಕುಗಳು ಅನೇಕ ಕುಟುಂಬಗಳಿಗೆ ದೊರೆತ್ತಿಲ್ಲ. ನ್ಯಾಯಾಲಯದ ಆದೇಶವಿದ್ದರೂ ಒಕ್ಕಲೆಬ್ಬಿಸಲಾದ ಆದಿವಾಸಿಗಳಿಗೆ ಪೂರ್ಣ ಪರಿಹಾರ ಇನ್ನೂ ದೊರೆತ್ತಿಲ್ಲ. ಸರಕಾರಿ ಉದ್ಯೋಗ ಗಗನ ಕುಸುಮವಾಗಿದೆ ಎಂದು ಗುರುಶಾಂತ್ ಆರೋಪಿಸಿದರು.
::: ಪೊನ್ನು ಸಾವಿಗೆ ನ್ಯಾಯ :::
ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಗ್ರಾಮದಲ್ಲಿ ಗುಂಡೇಟಿಗೆ ಬಲಿಯಾದ ಆದಿವಾಸಿ ಸಮುದಾಯದ ಕಾರ್ಮಿಕ ಪಣಿಎರವರ ಪೊನ್ನು ಅವರ ಕುಟುಂಬಕ್ಕೆ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸಾಂತ್ವನ ಹೇಳದೆ ಇರುವುದು ದುರಾದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಕರಣದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಬಂದೂಕು ಪರವಾನಗಿಯನ್ನು ರದ್ದುಗೊಳಿಸಬೇಕು, ನೊಂದ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ಮತ್ತು ರಕ್ಷಣೆ ಒದಗಿಸಬೇಕ. ಕನಿಷ್ಠ 25 ಲಕ್ಷ ರೂ. ಪರಿಹಾರ ನಿಧಿ ನೀಡಬೇಕು, ನಿವೇಶನ, ವಸತಿ ಮತ್ತು ಪೊನ್ನು ಪತ್ನಿಗೆ ಸರಕಾರದ ಖಾಯಂ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಜೆ.ಆರ್.ಪ್ರೇಮ ಹಾಗೂ ಕೊಡಗು ಜಿಲ್ಲಾ ಸದಸ್ಯ ಪಿ.ಜೆ.ಅಶೋಕ್ ಉಪಸ್ಥಿತರಿದ್ದರು.









